

ಕಾರವಾರ: ಜಾಗತಿಕ ಪರಿಸರದಲ್ಲಿ ಉಂಟಾಗುತ್ತಿರುವ ಹವಾಮಾನ ಬದಲಾವಣೆ (Climate change) ಮತ್ತು ವೈಪರೀತ್ಯಗಳ ತಡೆಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ನಾವಿ ಹೇಳಿದರು.
ಅವರು ಗುರುವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಹವಾಮಾನ ಬದಲಾವಣೆ ಕುರಿತು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ಬಗ್ಗೆ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹವಾಮಾನ ಬದಲಾವಣೆ (Climate change) ಮತ್ತು ವೈಪರೀತ್ಯಗಳ ತಡೆಗೆ ರೂಪಿಸಿರುವ ಮಾರ್ಗಸೂಚಿಗಳನ್ನು ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ತಪ್ಪದೇ ಅನುಸರಿಸಬೇಕು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮುದ್ರ ಮತ್ತು ನದಿಗಳಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಯುವ ಕುರಿತಂತೆ ಅರಣ್ಯ ಇಲಾಖೆ ವತಿಯಿಂದ ಕೋಸ್ಟಲ್ ಮೆರೈನ್ ಇಕೋ ಸಿಸ್ಟಂ ಜಾರಿಗೆ ತರಲಾಗಿದೆ. ಕೆ-ಶೋರ್ ಯೋಜನೆಯಡಿ ಕೂಡಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಂದರು. ಸAಪನ್ಮೂಲ ವ್ಯಕ್ತಿ ಡಾ. ಪ್ರಕಾಶ್ ಮೇಸ್ತಾ ಮಾತನಾಡಿ, ಜಗತ್ತಿನ ಯಾವುದೇ ಭಾಗದಲ್ಲಿ ಹವಾಮಾನ ವೈಪರೀತ್ಯವಾದಲ್ಲಿ ಅದರ ಪರಿಣಾಮ ವಿಶ್ವದ ಎಲ್ಲಾ ದೇಶಗಳಿಗೆ ಕಂಡುಬರುತ್ತದೆ. ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ ಪ್ರಪಂಚದ ಅತೀ ಹೆಚ್ಚು ಜನಸಂಖ್ಯೆ ಇದ್ದು ಈ ಭಾಗದಲ್ಲಿ ಹವಾಮಾನ ವೈಪರೀತ್ಯ ತಡೆಗೆ ಭಾರತ ತೆಗೆದುಕೊಳ್ಳುವ ಕ್ರಮಗಳು ಅತ್ಯಂತ ಮಹತ್ವವಾಗಲಿವೆ.
ಹವಾಮಾನದಲ್ಲಾಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಉತ್ತರ ಜಿಲ್ಲೆಯು ಅತ್ಯಂತ ಪ್ರಶಸ್ತವಾಗಿದ್ದು, ಇಲ್ಲಿನ ಕರಾವಳಿ ಮತ್ತು ಪಶ್ಚಿಮಘಟ್ಟಗಳಿಂದ ನಿಖರವಾಗಿ ಮಾಹಿತಿ ಪಡೆಯಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಸಂಶೋಧನಾ ವಿಜ್ಞಾನಿ ಡಾ. ಬಿ.ವಿ.ಶೃತಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ತರಬೇತಿ ಸಹಾಯಕಿ ರುಚಿತಶ್ರೀ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.