

ಶನಿವಾರಸಂತೆ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸೋಮವಾರ ವಿವಿಧ ಕಡೆ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.
ಆಲೂರು ಸಿದ್ದಾಪುರದ ಸಂಗಯ್ಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದಲ್ಲಿ ಅರೆಭಾಷೆ ಸಮುದಾಯದವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು. ಸಮುದಾಯ ಭವನ ಸುತ್ತ, ಅಂಗನವಾಡಿ ಕೇಂದ್ರ ಹಾಗೂ ಶನಿವಾರಸಂತೆ-ಕುಶಾಲನಗರ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಉಪಾಧ್ಯಕ್ಷ ಭಟ್ಯನ ಈರಪ್ಪ, ಕಾರ್ಯದರ್ಶಿ ಕುಯ್ಯುಮುಡಿ ಜಯಕುಮಾರ್, ಖಜಾಂಚಿ ಎ.ಎಸ್.ರಾಮಣ್ಣ, ಪರ್ಲಕೋಟಿ ಶೈಲಾ ಸತೀಶ್ ಇತರರು ಇದ್ದರು.
ಆಲೂರು ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಆಲೂರು ಸಿದ್ದಾಪುರದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದ ಬಂಡಿಯಮ್ಮನ ದೇವಾಲಯ ಸುತ್ತಮುತ್ತ ಸ್ವಚ್ಛತೆ ನಡೆಸಿದರು.