

* ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮಾಹಿತಿ
* ವಿಶೇಷ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ
ಬಿಡದಿ
ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಫುಟ್ಪಾತ್ ತೆರವುಗೊಳಿಸಲಾಗಿದ್ದು, ಆ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ತಿಳಿಸಿದರು.
ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯ ಅಧ್ಯತೆ ವಹಿಸಿ ಮಾತನಾಡಿ, ಐಡಿಬಿಐ ಬ್ಯಾಂಕ್ನಿಂದ ರೈಲು ನಿಲ್ದಾಣದ ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಫುಟ್ಪಾತ್ ತೆರವು ಮಾಡಲಾಗಿದೆ. ಇದೀಗ ಪುರಸಭೆ ಅನುದಾನ ಬಳಸಿಕೊಂಡು ಚರಂಡಿ, ವಿದ್ಯುತ್ ಕಂಬಗಳ ಅಳವಡಿಕೆ, ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಕುಮಾರ್ ಮಾತನಾಡಿ, ಪುರಸಭೆಯಲ್ಲಿ ಅಧಿಕಾರಿಗಳು ತಮಗಿಷ್ಟ ಬಂದ ಹಾಗಕೆಲಸ ಮಾಡುತ್ತಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ ಸಭೆ ಕರೆದಿದ್ದೀರಿ. ಆದರೆ, ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ಎಸ್ಟಿಮೆಂಟ್ ಸಿದ್ಧಪಡಿಸಿಕೊಂಡು ಬರಲು ಆಗಿಲ್ಲ. ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಆಗುತ್ತದೆಯೇ ಎಂದು ಇಂಜಿನಿಯರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮಾತಿನ ಚಕಮಕಿ:
ಐಡಿಬಿಐ ಬ್ಯಾಂಕ್ನಿಂದ ರೈಲು ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ಉಮೇಶ್, ಪುರಸಭೆಯಿಂದ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದು ರೆಸ್ಯುಲೇಷನ್ ಬರೆಯಿರಿ. ಶಾಸಕ ಬಾಲಕೃಷ್ಣ ಅವರ ಗಮನಕ್ಕೆ ತಂದು ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಉಮೇಶ್ ಅವರ ಮಾತಿನಿಂದ ಕೆರಳಿದ ಜೆಡಿಎಸ್ ಸದಸ್ಯ ದೇವರಾಜು, ಶಾಸಕರಿಂದ ಬಿಡದಿ ಅಭಿವೃದ್ಧಿಗೆ ಇಲ್ಲಿಯವರೆಗೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಕೇವಲ ಎರಡು ರಸ್ತೆಗಳನ್ನಷ್ಟೇ ಅಭಿವೃದ್ಧಿ ಪಡಿಸಿದ್ದಾರೆ. ಇದನ್ನು ಬಿಟ್ಟು ನಯಾ ಪೈಸೆ ತಂದಿಲ್ಲ. ಕೇತಿಗಾನಹಳ್ಳಿಯ ವಾರ್ಡ್ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹಾಕಿದ್ದ 4 ಕೋಟಿ ರೂ. ಅನುದಾನವನ್ನು ಕಿತ್ತು ಇತರೆ ವಾರ್ಡ್ಗಳಿಗೆ ಹಂಚಿಕೆ ಮಾಡಿ ಭೂಮಿ ಪೂಜೆ ಮಾಡಿದ್ದಾರೆ ಅಷ್ಟೇ ಎಂದು ತಿರುಗೇಟು ನೀಡಿದರು.
ಪಾರ್ಕಿಂಗ್ ವ್ಯವಸ್ಥೆಗೆ ಕಡಿವಾಣ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ವಾಹನ ಸಾವರರು ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಹಾಕಿ ಹೋಗುತ್ತಿದ್ದಾರೆ. ಇದರಿಂದಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಹಾಗಾಗಿ ಪುರಸಭೆ ವತಿಯಿಂದ ಟೋಯಿಂಗ್ ವಾಹನ ಬಾಡಿಗೆಗೆ ತೆಗೆದುಕೊಂಡು ಪೊಲೀಸ್ ಇಲಾಖೆಗೆ ನೀಡಿದರೆ ಅನಧಿಕೃತ ಪಾರ್ಕಿಂಗ್ ವ್ಯವಸ್ಥೆಗೆ ಕಡಿವಾಣ ಹಾಕಬಹುದು ಎಂದು ಅಧ್ಯಕ್ಷ ಹರಿಪ್ರಸಾದ್ ಸದಸ್ಯರ ಒಪ್ಪಿಗೆಗಾಗಿ ಮಂಡಿಸಿದರು. ಇದಕ್ಕೆ ಕೆಲ ಸದಸ್ಯರು ಆೇಪ ವ್ಯಕ್ತಪಡಿಸಿದರು. ಈ ವ್ಯವಸ್ಥೆ ಜಾರಿಯಿಂದ ಪಾರ್ಕಿಂಗ್ ಸಮಸ್ಯೆ ಕೊನೆಯಾಗುವುದಿಲ್ಲ. ಮೊದಲು ಪುರಸಭೆ ವತಿಯಿಂದ ಪಾರ್ಕಿಂಗ್ ಜಾಗ ಗುರುತು ಮಾಡಿದ ನಂತರ ಈ ಯೋಜನೆ ಜಾರಿಗೆ ತನ್ನಿ ಎಂದರು.