

ಹನೂರು: ತಾಲೂಕಿನ ತಾಳುಬೆಟ್ಟ ಮಲೆ ಮಹದೇಶ್ವರಬೆಟ್ಟ ಮಾರ್ಗದ ರಸ್ತೆ ಬದಿಯಲ್ಲಿ ಒಣಗಿ ನಿಂತಿದ್ದ ಬಿದಿರು ಮೆಳೆಯನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ತೆರೆವುಗೊಳಿಸಿದರು.
ಇತ್ತೀಚಿನ ದಿನಗಳಲ್ಲಿ ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿದ್ದಾರೆ. ಆದರೆ ಶ್ರೀ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ತಾಳುಬೆಟ್ಟ ಮ.ಬೆಟ್ಟದ ಮಾರ್ಗದಲ್ಲಿ ಬೇಸಿಗೆಯ ಹಿನ್ನೆಲೆ ಕೆಲವು ಕಡೆಗಳಲ್ಲಿ ಬಿದಿರು ಒಣಗಿದ್ದು, ರಸ್ತೆಗೆ ಬಾಗಿಕೊಂಡಿತ್ತು. ಇದರಿಂದ ಬೀಳುವ ಸ್ಥಿತಿಯಲ್ಲಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ವಾಹನ ಸವಾರರು ಅದರಲ್ಲೂ ಬೈಕ್ ಸವಾರರಲ್ಲಿ ಜೀವಭಯದಿಂದ ಸಂಚರಿಸಬೇಕಾದ ಸ್ಥಿತಿ ಎದುರಾಗಿತ್ತು. ಇದರ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಅವರು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಅನಾಹುತ ಸಂಭವಿಸುವ ಮೊದಲು ಒಣಗಿ ನಿಂತಿರುವ ಬಿದಿರನ್ನು ತೆರೆವುಗೊಳಿಸುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಶನಿವಾರದ ವಿಜಯವಾಣಿ ಸಂಚಿಕೆಯಲ್ಲಿ ಒಣಗಿದ ಬಿದಿರು ತೆರೆವಿಗೆ ಆಗ್ರಹ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಶನಿವಾರ ರಸ್ತೆ ಬದಿಯಲ್ಲಿ ಒಣಗಿದ್ದ ಬಿದಿರನ್ನು ತೆರೆವುಗೊಳಿಸಿದೆ. ಇದರಿಂದ ಭಕ್ತರು ನಿಟ್ಟುಸಿರು ಬಿಟ್ಟಂತಾಗಿದ್ದು, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.