

ಕಡಬ: ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕುಟ್ರುಪ್ಪಾಡಿ ಗ್ರಾ.ಪಂ.ನ ಬಲ್ಯ ಗ್ರಾಮದ ಕುದ್ರಡ್ಕ ಎಂಬಲ್ಲಿ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ ಮರದ ಕೊಂಬೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ಸದಸ್ಯರು ತೆರವುಗೊಳಿಸಿದ್ದಾರೆ.
ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಈ ಮರದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯಲಾಗಿತ್ತು. ಅಧಿಕಾರಿಗಳು ಸ್ಪಂದಿಸದ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸುದ್ದಿ ಗಮನಿಸಿ ಐತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್.ಕೆ ಸ್ಥಳೀಯರನ್ನು ಸಂಪರ್ಕಿಸಿದ್ದರು. ಬಳಿಕ ಸಂಬಂಧಿಸಿದ ಇಲಾಖೆಗೂ ಮಾಹಿತಿ ರವಾನಿಸಿದ್ದರು. ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಮರದ ಕೊಂಬೆ ತೆಗೆಯಲಾಯಿತು.