ರಸ್ತೆಬದಿ ವಿದ್ಯುತ್ ಕಂಬಗಳ ರಾಶಿ ಬೇಡ

Ism_electric-Poles
Published on

ಪುತ್ತೂರು ಗ್ರಾಮಾಂತರ: ಕುಂಬ್ರ ಮೆಸ್ಕಾಂ ಇಲಾಖೆ ವಿದ್ಯುತ್ ಕಂಬಗಳನ್ನು ಕುಂಬ್ರ-ಬೆಳ್ಳಾರೆ ಮುಖ್ಯ ರಸ್ತೆಯ ಕುಯ್ಯರು ಎಂಬಲ್ಲಿನ ತಿರುವು ಭಾಗದ ರಸ್ತೆ ಬದಿಯಲ್ಲಿ ರಾಶಿ ಹಾಕಿರುವುದಲ್ಲದೆ, ಕ್ರೇನ್ ಮೂಲಕ ಕಂಬಗಳನ್ನು ಇಳಿಸುವ, ಲೋಡ್ ಮಾಡುವ ಕಾರ್ಯ ನಡೆಸುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ವಿದ್ಯುತ್ ಕಂಬಗಳನ್ನು ಹಾಕುವ ಸ್ಥಳವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ-ಮಾಲೀಕರ ಸಂಘದ ವತಿಯಿಂದ ಶುಕ್ರವಾರ ಕುಂಬ್ರ ಮೆಸ್ಕಾಂಗೆ ಮನವಿ ಸಲ್ಲಿಸಲಾಯಿತು.

ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ, ಉಪಾಧ್ಯಕ್ಷ ಸುಧಾಕರ ಪಾಟಾಳಿ, ಪ್ರಧಾನ ಕಾರ್ಯದರ್ಶಿ ಉದಯ ಮಡಿವಾಳ, ಕಾರ್ಯದರ್ಶಿ ಸಂಶುದ್ದೀನ್ ಜಿ, ಮಾಜಿ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ತಾಜುದ್ದೀನ್, ಲೋಕೇಶ್ ರೈ ಮನವಿ ಸಲ್ಲಿಸಿದ್ದಾರೆ.

ಕುಯ್ಯರು ಎಂಬಲ್ಲಿ ವಿದ್ಯುತ್ ಕಂಬಗಳನ್ನು ತಂದು ರಾಶಿ ಹಾಕುತ್ತಿರುವ ಸ್ಥಳ ತಿರುವು ರಸ್ತೆ ಭಾಗವಾಗಿದೆ. ಈ ಸ್ಥಳದಲ್ಲಿ ಅನೇಕ ವಾಹನ ಅಪಘಾತಗಳು ಕೂಡ ನಡೆದಿವೆ. ಹಾಗಾಗಿ ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಕಯ್ಯರುನಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕದೇ ಬೇರೆ ಕಡೆಯಲ್ಲಿ ಹಾಕಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಮ್ಮ ಮನವಿಗೆ ಸ್ಪಂದನೆ ನೀಡದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net