

ವಿಜಯವಾಣಿ ಸುದ್ದಿಜಾಲ ಕೋಟ
ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕದ್ರಿಕಟ್ಟು ಭಾಗದಲ್ಲಿ ಸಾರ್ವಜನಿಕ ದಾರಿಯನ್ನೇ ಖಾಸಗಿಯಾಗಿ ಕಾಂಪೌಂಡ್ ನಿರ್ಮಾಣಕ್ಕೆ ಬಳಸಿ ಅಡಚಣೆ ಉಂಟುಮಾಡಿದ್ದು, ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ನೇತೃತ್ವದಲ್ಲಿ ಮಂಗಳವಾರ ಕಂಪೌಂಡ್ ತೆರವುಗೊಳಿಸಲಾಯಿತು.
ಸಾರ್ವಜನಿಕರು ಈ ಕುರಿತು ತಹಸೀಲ್ದಾರ್‌ನಲ್ಲಿ ಮನವಿ ಮಾಡಿದ್ದು, ಅನೇಕ ವರ್ಷಗಳಿಂದ ಈ ದಾರಿ ಸಾರ್ವಜನಿಕ ಬಳಕೆಯಲಿದೆ. ಕೆಲವು ಮನೆಗಳಿಗೆ ಹಾಗೂ ಗದ್ದೆಗಳಿಗೆ ತೆರಳಲು ಇದೇ ರಸ್ತೆಯನ್ನೇ ಬಳಸಲಾಗುತ್ತಿತ್ತು. ಇದಕ್ಕೆ ಸ್ಥಳೀಯರೊಬ್ಬರು ಇತ್ತೀಚೆಗೆ ಅಡ್ಡಿಪಡಿಸಿದ್ದು, ಏಕಾಏಕಿ ಕಾಂಪೌಂಡ್ ನಿರ್ಮಿಸಿ ಕಾಲುದಾರಿಯನ್ನು ಮುಚ್ಚಿದ್ದಾರೆ. ಇದೇ ರಸ್ತೆ ಅವಲಂಬಿತರಾಗಿದ್ದವರು ಈಗಾಗಲೇ ತಮ್ಮ ಮನೆ ತೊರೆದು ಬೇರೆಡೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳ ಪರಿಶೀಲಿಸಿದ ತಹಸೀಲ್ದಾರರು ಕಾಂಪೌಂಡ್ ತೆರವಿಗೆ ಸೂಚಿಸಿದರೂ ಉಲ್ಲಂಘಿಸಿದ್ದರಿಂದ ಮಂಗಳವಾರ ಪೊಲೀಸರ ಸಮ್ಮುಖದಲ್ಲಿ ತಡೆಗೋಡೆ ತೆರವುಗೊಳಿಸಲಾಯಿತು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಬಾರಿಕೆರೆ, ಕೋಟ ಠಾಣೆ ಕ್ರೈಂ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಎಎಸ್‌ಐ ಜಯಪ್ರಕಾಶ್ ಹಾಗೂ ಸಿಬಂದಿ, ಆರ್.ಐ ಮಂಜು ಬಿಲ್ಲವ, ಗ್ರಾಮ ಆಡಳಿತಾಧಿಕಾರಿ ಚೆಲುವರಾಜು, ಪಿಡಿಒ ರವೀಂದ್ರ ರಾವ್, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಮೊದಲಾದವರು ಇದ್ದರು.