ಗೋಪಾಲಪುರದಲ್ಲಿ ಅಕ್ರಮ ಗುಡಿಸಲುಗಳ ತೆರವು

26_Tnp_1b
Published on

ತಿ.ನರಸೀಪುರ: ಪಟ್ಟಣದ ಗೋಪಾಲಪುರದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸರ್ವೇ ನಂ.7ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಗುಡಿಸಲುಗಳನ್ನು ತೆರವುಗೊಳಿಸಿದರು.

ಬೆಳಗಿನ ನಸುಕಿನಲ್ಲೇ ಗೋಪಾಲಪುರ ನಿವೇಶನದಲ್ಲಿ ಎರಡು ಇಟಾಚಿಗಳು ಸತತ ಮೂರು ತಾಸಿಗೂ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ತಲೆ ಎತ್ತಿದ್ದ ಗುಡಿಸಲುಗಳನ್ನು ನೆಲಸಮಗೊಳಿಸಿದವು. ತೆರವುಗೊಂಡ ಗುಡಿಸಲುಗಳ ಅವಶೇಷಗಳನ್ನು ಪುರಸಭೆ ಟ್ರ್ಯಾಕ್ಟರ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.

ಕೆಲವು ತಿಂಗಳ ಹಿಂದೆಯಷ್ಟೇ ಗೋಪಾಲಪುರ ಸರ್ವೇ ನಂ.7ರ ನಿವೇಶನವನ್ನು ತಮಗಷ್ಟೇ ಹಂಚಿಕೆ ಮಾಡಬೇಕೆಂದು ನಿವಾಸಿಗಳು ಒತ್ತಾಯಿಸಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗದ ಜಿ.ಎಸ್.ರಘು ಹಾಗೂ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ನೇತೃತ್ವದಲ್ಲಿ ಬಿರುಸಿನ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.

ಕಾರ್ಯಾಚರಣೆಯ ವೇಳೆ ಅನಧಿಕೃತವಾಗಿ ಹಾಕಲಾಗಿದ್ದ ಬಾಬು ಜಗಜೀವನರಾಮ್ ಭಾವಚಿತ್ರವಿದ್ದ ಫಲಕವನ್ನು ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಗೋಪಾಲಪುರ ಮುಖಂಡರು ಪ್ರತಿಭಟನೆ ನಡೆಸಿದರು. ಈ ವೇಳೆ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ಕಾರ್ಯಾಚರಣೆ ಮುಗಿದ ಬಳಿಕ ಬಿಡುಗಡೆ ಮಾಡಲಾಯಿತು. ತೆರವು ಕಾರ್ಯಾಚರಣೆ ಸಂಬಂಧ ನೋಟಿಸ್ ಜಾರಿ ಮಾಡಿ, ಬಿಗಿ ಭದ್ರತೆಗೆ 4 ಮೀಸಲು ತುಕಡಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಗುಡಿಸಲು ತೆರವು ಕಾರ್ಯಾಚರಣೆಗೆ ವಕೀಲ ಪ್ರಕಾಶ್ ಎಂಬುವರು ಆಕ್ಷೇಪ ವ್ಯಕ್ತಪಡಿಸಿದರು. ಇಕ್ಕಟ್ಟಿನ ಕಿರಿದಾದ ಮನೆಗಳಲ್ಲಿ ಗೋಪಾಲಪುರ ನಿವಾಸಿಗಳು ವಾಸವಿದ್ದಾರೆ. ಶೌಚಗೃಹ ನಿರ್ಮಾಣಕ್ಕೂ ಜಾಗವಿಲ್ಲ. ಈ ಹಿಂದೆ ಗುಡಿಸಲು ನಿರ್ಮಾಣದ ವೇಳೆ ಆಗಮಿಸಿದ್ದ ಪುರಸಭೆ ಮುಖ್ಯಾಧಿಕಾರಿಗಳು ಸರ್ವೇ ನಂ.7ರ ನಿವೇಶನ ನಮ್ಮದಲ್ಲ ಎಂದಿದ್ದರು. ಈಗ ಖುದ್ದಾಗಿ ನಿಂತು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗೋಪಾಲಪುರ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ಮಾತನಾಡಿ, ಗೋಪಾಲಪುರ ಸರ್ವೇ ನಂ.7ರಲ್ಲಿ 5.03 ಎಕರೆ ಪುರಸಭೆಯ ನಿವೇಶನವನ್ನು ಅತಿಕ್ರಮಿಸಿಕೊಂಡು ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಆದರೆ ಯಾವುದೇ ಕುಟುಂಬಗಳು ವಾಸವಿರಲಿಲ್ಲ. ಸರ್ಕಾರಿ ನಿವೇಶನವನ್ನು ರಕ್ಷಿಸಲು ಜಿಲ್ಲಾಡಳಿತದ ಸೂಚನೆಯಂತೆ ತೆರವು ಕಾರ್ಯಚರಣೆ ನಡೆಸಿದ್ದೇವೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಧನಂಜಯ, ಮನೋಜ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಜಗದೀಶ್ ಧೂಳ ಶೆಟ್ಟಿ, ಪುರಸಭೆ ವ್ಯವಸ್ಥಾಪಕ ಮಹೇಂದ್ರ ಸೇರಿದಂತೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net