ಅರಣ್ಯ ಭೂಮಿ ಒತ್ತುವರಿ ತೆರವು

Kdb_land-encroachment
Published on

ಕಡಬ: ತಾಲೂಕಿನ ಐತ್ತೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡಿರುವುದನ್ನು ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಾಧೀನಪಡಿಸಿ ನೆಡುತೋಪು ನಿರ್ಮಿಸಿದ್ದಾರೆ.

ಜಾಗದಲ್ಲಿದ್ದ ಅಡಕೆ ಮರಗಳನ್ನು ತೆರವುಗೊಳಿಸಿ ಗಂಧ ಮತ್ತು ಇತರ ಕಾಡುತ್ಪತ್ತಿ ಗಿಡಗಳನ್ನು ನೆಟ್ಟು ನೆಡುತೋಪು ನಿರ್ಮಿಸಿ ಇಲಾಖೆ ಸೂಚನಾ ಫಲಕ ಅಳವಡಿಸಿದೆ.

ಪ್ರಕರಣದ ಹಿನ್ನೆಲೆ

ಕಡಬ ತಾಲೂಕಿನ ಐತ್ತೂರು ಗ್ರಾಮದ ಸರ್ವೇ ನಂಬರ್ 153/1ರಲ್ಲಿ ಮೋಹನ್ ಎಂಬುವರು ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿರುವುದಾಗಿ ಆರೋಪಿಸಿ 2014ರಲ್ಲಿ ಐತ್ತೂರು ಗ್ರಾಮದ ಸತೀಶ್ ಕೆ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ಜಂಟಿ ಸರ್ವೇ ನಡೆಸಲು ಸೂಚಿಸಿದಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿತ್ತು. ಈ ಸಂದರ್ಭ 1.25 ಎಕರೆ ಜಾಗ ಮೀಸಲು ಅರಣ್ಯ ಎಂಬುದಾಗಿ ಮತ್ತು 4.98 ಎಕರೆ ಜಾಗ ಅರಣ್ಯ ಬಫರ್ ಝೋನ್ ಎಂದು ತಿಳಿದುಬಂದಿತ್ತು.

1.25 ಎಕರೆ ಜಾಗ ಬಿಟ್ಟುಕೊಡುವಂತೆ ಜಾಗ ಒತ್ತುವರಿದಾರರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿ ಕಂದಕ ನಿರ್ಮಿಸಿತ್ತು. ಇದರ ವಿರುದ್ಧ ಒತ್ತುವರಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಬಳಿಕ ಬೆಳವಣಿಗೆಯಲ್ಲಿ ಅರಣ್ಯ ಇಲಾಖೆ ಪರವಾಗಿ ಹೈಕೋರ್ಟ್‌ನ ಹೆಚ್ಚುವರಿ ಸರ್ಕಾರಿ ವಕೀಲ ರಾಹುಲ್ ಕಾರ್ಯಪ್ಪ ವಾದ ಮಂಡಿಸಿ 1 ಎಕರೆ 25 ಸೆಂಟ್ಸ್ ಅಳತೆಯ ಅರಣ್ಯ ಭೂಮಿಯ ಭಾಗವನ್ನು ಅತಿಕ್ರಮಿಸಿರುವ ಬಗ್ಗೆ ನ್ಯಾಯಾಲಯಕ್ಕೆ ದಾಖಲೆ ಸಹಿತ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒತ್ತುವರಿದಾರರ ಅರ್ಜಿಯನ್ನು ವಜಾಗೊಳಿಸಿ ಜಾಗ ಸ್ವಾಧೀನಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆಗೆ ಆದೇಶ ಮಾಡಿತ್ತು.

ಕೋರ್ಟ್‌ನ ಆದೇಶದ ಬಳಿಕವೂ ಅರಣ್ಯ ಇಲಾಖೆ ತನ್ನ ಜಾಗ ಸ್ವಾಧೀನಪಡಿಸಿಕೊಳ್ಳದ ಬಗ್ಗೆ ಬೆಂಗಳೂರಿನ ಅರಣ್ಯಭವನದಲ್ಲಿರುವ ಅಪರ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಮತ್ತು ಜನಸ್ಪಂದನಾ ಕಾರ್ಯಕ್ರಮದಲ್ಲೂ ಸತೀಶ್ ದೂರು ನೀಡಿದ್ದರು. ಈ ಎಲ್ಲ ಬೆಳವಣಿಗೆ ಬಳಿಕ ಅರಣ್ಯ ಇಲಾಖೆ 1 ಎಕರೆ 25 ಸೆಂಟ್ಸ್ ಜಾಗ ಸ್ವಾಧೀನಪಡಿಸಿ ಜಾಗದಲ್ಲಿದ್ದ ಅಡಕೆ ಮರಗಳನ್ನು ತೆರವುಗೊಳಿಸಿದೆ. ಉಚ್ಚ ನ್ಯಾಯಾಲಯದ ಆದೇಶದಂತೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿ, ಅಲ್ಲಿ ಗಂಧ ಹಾಗೂ ಇತರ ಕಾಡುತ್ಪತ್ತಿ ಗಿಡಗಳನ್ನು ನಾಟಿ ಮಾಡಿ ನೆಡುತೋಪು ನಿರ್ಮಿಸಲಾಗಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದ್ದಾರೆ.

ಸಚಿವರ ಸೂಚನೆ ಬೆನ್ನಲ್ಲೇ ಬೆಳವಣಿಗೆ

ಪಶ್ಚಿಮಘಟ್ಟದ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ಕಾರ್ಯಪಡೆಗೆ ಸೂಚಿಸಿರುವುದಾಗಿ ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಅರಣ್ಯ ಒತ್ತುವರಿಯ ಬಗ್ಗೆ ಕಡಬ ತಾಲೂಕಿನಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net