

* ಒತ್ತುವರಿದಾರರಿಗೆ ಬಿಸಿ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸುಗಮ ಸಂಚಾರಕ್ಕೆ ಒತ್ತು ನೀಡಿ, ಪಾದಚಾರಿ ಮಾರ್ಗ ಒತ್ತುವರಿ ತಡೆಗಟ್ಟಲು ಮುಂದಾಗಿರುವ ನಗರಸಭೆ ಪ್ರಮುಖ ಸ್ಥಳಗಳಲ್ಲಿ ಶಾಶ್ವತವಾಗಿ ಅಂಗಡಿ ಮುಂಗಟ್ಟು ನಿರ್ಮಾಣ ಮಾಡಿಕೊಂಡ ಒತ್ತುವರಿದಾರರಿಗೆ ಜೆಸಿಬಿ ಗರ್ಜನೆ ಮೂಲಕ ಬಿಸಿ ಮುಟ್ಟಿಸುತ್ತಿದೆ.
ನಗರದ ಸ್ವಚ್ಛತೆ, ಸೌಂದರ್ಯಕ್ಕೆ ಆದ್ಯತೆ ನೀಡಲು ಮುಂದಾಗಿರುವ ನಗರಸಭೆ, ಜಿಲ್ಲಾ ಕೇಂದ್ರದ ಪಾದಚಾರಿ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮವಹಿಸಿದ್ದು, ಆಯಕಟ್ಟಿನ ಪ್ರಮುಖ ರಸ್ತೆ, ಉದ್ಯಾನವನ, ಮಾರುಕಟ್ಟೆ ಆವರಣದಲ್ಲಿ ಶಾಶ್ವತವಾಗಿ ಗೋಡೆ, ಕಬ್ಬಿಣದ ಶೆಡ್ ನಿರ್ಮಾಣ ಮಾಡಿ ವ್ಯಾಪಾರ ನಡೆಸುತ್ತಿದ್ದ ಪಾದಚಾರಿ ಮಾರ್ಗ ಒತ್ತುವರಿದಾರರ ಶೆಡ್‌ಗಳನ್ನು ನೆಲಸಮ ಮಾಡುವ ಮೂಲಕ ಶಾಕ್ ನೀಡಿದೆ.
ಎಪಿಎಂಸಿ ಆವರಣದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಶಾಶ್ವತ ಅಂಗಡಿ ನಿರ್ಮಾಣ ಮಾಡಿಕೊಂಡು ನಗರಸಭೆಗೆ ಯಾವುದೇ ಶುಲ್ಕ ನೀಡದೆ, ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದ ಮಳಿಗೆಗಳನ್ನು ಕಳೆದ ತಿಂಗಳು ನಗರಸಭೆ ತೆರವು ಮಾಡಿತ್ತು. ನಂತರ ರಾಮನಗರದ ರೋಟರಿ ಸರ್ಕಲ್‌ನಲ್ಲಿ ಖಾಸಗಿ ಆಸ್ಪತ್ರೆ ಆವರಣಕ್ಕೆ ಹೊಂದಿಕೊಂಡಂತೆ ಬೆಂಗಳೂರು- ಮೈಸೂರು ರಸ್ತೆಯಲ್ಲಿ ವ್ಯಾಪಾರ ನಡೆಸಲು ಶಾಶ್ವತ ಕಟ್ಟಡ ನಿರ್ಮಾಣ ಮಾಡಿದ್ದವರನ್ನು ತೆರವುಗೊಳಿಸಿತ್ತು. ರಾಮನಗರದ ಕೋರ್ಟ್‌ರಸ್ತೆಯಲ್ಲಿನ ಗಾಂಧಿ ಪಾರ್ಕ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಎರಡು ಮಳಿಗೆಗಳು ತಲೆಯೆತ್ತಿದ್ದವು. ತೆರವಿಗೆ ಕಾಲಾವಾಕಾಶ ನೀಡಿದರೂ ಸಂಬಂಧಿಸಿದವರು ತೆರವು ಮಾಡುವ ಗೋಜಿಗೆ ಹೋಗಿರಲಿಲ್ಲ. ನಗರಸಭೆ ಕಾರ್ಯೋನ್ಮುಖವಾಗಿ ಸಿಬ್ಬಂದಿ ಜೆಸಿಬಿ ಮೂಲಕ ಪಾದಚಾರಿ ಮಾರ್ಗವನ್ನು ತೆರವು ಮಾಡಿದ್ದಾರೆ.
ನಗರಸಭೆ ಜಾಗದಲ್ಲಿ ಅನಧಿಕೃತ ಮಳಿಗೆ ನಿರ್ಮಾಣ ಮಾಡಿಕೊಂಡು ವ್ಯಾಪಾರಕ್ಕೂ ನಗರಸಭೆಯಿಂದ ಅನುಮತಿ ಕೇಳಿ ಯಾವುದೋ ಕಾರಣದಿಂದ ಅನುಮತಿ ನೀಡಿದ ಪಕ್ಷದಲ್ಲಿ ಮುಂದೆ ಅದನ್ನೇ ಆಧಾರವಾಗಿಟ್ಟುಕೊಂಡು ಸಾಲ ಸೌಲಭ್ಯ ಪಡೆದು ನಂತರ ಒತ್ತುವರಿ ಆಸ್ತಿಯನ್ನು ಸಕ್ರಮದಡಿ ಸ್ವಂತ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಇದಕ್ಕೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಆಸ್ತಿ ರಕ್ಷಣೆ ಮಾಡುವ ಜತೆಗೆ ಇಕ್ಕಟ್ಟಾದ ಜಾಗಕ್ಕೆ ಹೊಸ ರೂಪ ನೀಡಲು ಚಿಂತನೆ ನಡೆಸಿರುವ ನಗರಸಭೆ ಕೆಲ ಒತ್ತುವರಿದಾರರ ಕೆಂಗಣ್ಣಿಗೆ ಗುರಿಯಾದರೂ ಸರಿಯೇ ಸಾರ್ವಜನಿಕ ಹಿತ ಮುಖ್ಯ ಎಂಬ ಸಂದೇಶ ನೀಡಲು ಮುಂದಾಗಿದೆ. ಮುಂದೆ ಇದೇ ರೀತಿ ಅನಧಿಕೃತ ಜಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಹಿತ ಕಾಯಬೇಕೆಂಬುದು ಜನರ ಅಭಿಪ್ರಾಯ.
ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಅನಧಿಕೃತವಾಗಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಇದನ್ನು ಗುರ್ತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾವರ್ಜನಿಕ ಆಸ್ತಿ ರಕ್ಷಣೆ ಮತ್ತು ನಗರದ ಸೌಂದರ್ಯ ಸ್ವಚ್ಛತೆ, ನಗರಸಭೆ ಧ್ಯೇಯವಾಗಿದೆ. ಕೆ.ಶೇಷಾದ್ರಿನಗರಸಭೆ ಅಧ್ಯಕ್ಷ ರಾಮನಗರ‘==ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಶಾಶ್ವತ ಮಳಿಗೆ ನಿರ್ಮಾಣ ಮಾಡಿರುವ ಕಾರಣ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಆ ಕಾರಣಕ್ಕೆ ಅಚರಿಗೆ ಸಾಕಷ್ಟು ಸಮಯಾವಕಾಶ ನೀಡಿ ತೆರವು ಮಾಡಲು ಸಮಯ ನೀಡಲಾಗುತ್ತಿದೆ. ತೆರವು ಮಾಡದಿದ್ದವರಿಗೆ ನಗರಸಭೆ ಕಾರ್ಯಾಚರಣೆ ನಡೆಸುತ್ತಿದೆ. ನಗರದ ಸೌಂಧರ್ಯ ಮತ್ತು ಜನರ ಸುಗಮ ಸಂಚಾರಕ್ಕೆ ಒತ್ತು ನೀಡುವುದು ಅಪಘಾತ ತಪ್ಪಿಸುವುದು ನಗರಸಭೆ ಯದ್ದಾಗಿದೆ. ಡಾ. ಜಯಣ್ಣ, ಆಯುಕ್ತರು, ನಗರಸಭೆ , ರಾಮನಗರ