ತೇಗನಹಳ್ಳಿ ಚಿಕ್ಕಕೆರೆ ಒತ್ತುವರಿ ತೆರವುಗೊಳಿಸಿ

IMG-20241002-WA0287
Published on

ಕೆ.ಆರ್.ಪೇಟೆ: ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿರುವ ತೇಗನಹಳ್ಳಿ ಚಿಕ್ಕಕೆರೆ(ಕಾಳೇಗೌಡನ ಕಟ್ಟೆ)ಯನ್ನು ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.


ಕೆರೆಗೆ ಸಂಬಂಧಿಸಿದ ದಾಖಲಾತಿಗಳನ್ನು ತಹಸೀಲ್ದಾರ್ ಅವರಿಗೆ ನೀಡಿ ಕೆರೆ ತೆರವಿಗೆ ಒತ್ತಾಯಿಸಿದರು.
ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನ ಹಿರೀಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತೇಗನಹಳ್ಳಿ ಸರ್ವೇ ನಂ.77ರ ಗೋಮಾಳದಲ್ಲಿ ಚಿಕ್ಕಕೆರೆ ಇದೆ. ಸದರಿ ಕೆರೆ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಹೇಮಾವತಿ ಎಡದಂಡೆ ನಾಲೆಯಡಿ ಬರುವ 54 ನೇ ವಿತರಣಾ ನಾಲೆಯಿಂದ ಸದರಿ ಕೆರೆಗೆ ಹೇಮೆಯ ನೀರು ತುಂಬಿಸಲಾಗುತ್ತದೆ. ಹಲವು ದಶಕಗಳಿಂದ ಸದರಿ ಕೆರೆಯನ್ನು ಗ್ರಾಮಸ್ಥರು ದನ ಕರುಗಳ ಕುಡಿಯುವ ನೀರಿಗೆ, ಬಟ್ಟೆ ತೊಳೆಯುವುದು ಮತ್ತಿತರ ದೈನಂದಿನ ಬಳಕೆಗೆ ಉಪಯೋಗಿಸುತ್ತಿದ್ದರು. ಕಳೆದ ಒಂದು ದಶಕದಿಂದ ಸದರಿ ಕೆರೆಯನ್ನು ಗುತ್ತಿಗೆದಾರರಾದ ಪಿ.ಕೆ.ಶಿವರಾಮು ಮತ್ತು ಪಿ.ಕೆ.ಜಯಕೃಷ್ಣ ಕುಟುಂಬದವರು ಅತಿಕ್ರಮಿಸಿ ಸಂಪೂರ್ಣ ಕೆರೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಕೆರೆಗೆ ಗ್ರಾಮಸ್ಥರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಸದರಿ ಕೆರೆಯಲ್ಲಿ ರೆಸಾರ್ಟ್ ಮಾದರಿಯ ಕಟ್ಟಡ ನಿರ್ಮಿಸಿಕೊಂಡು ಬೋಟಿಂಗ್ ವ್ಯವಸ್ಥೆ ಹಾಗೂ ಮೀನುಗಾರಿಕೆ ಮತ್ತಿತರ ಚಟುವಟಿಕೆ ನಡೆಸುತ್ತಿದ್ದಾರೆ.


ಕೆರೆ ಅಭಿವೃದ್ಧಿಗೆ ನೀರಾವರಿ ಇಲಾಖೆ 2005-06ನೇ ಸಾಲಿನಲ್ಲಿ 5.84 ಲಕ್ಷ ರೂ.ಮತ್ತು 3.85 ಲಕ್ಷ ರೂ., 2009-10ನೇ ಸಾಲಿನಲ್ಲಿ 10 ಲಕ್ಷ ರೂ.ಗಳ ಅನುದಾನ ಬಳಸಿ ಕೆರೆ ಏರಿಯ ದುರಸ್ತಿ ಮತ್ತು ಕೋಡಿ ಅಭಿವೃದ್ಧಿ ಮಾಡಿದೆ. ಸದರಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೆರೆ ಅತಿಕ್ರಮಿಸಿಕೊಂಡಿರುವ ಗುತ್ತಿಗೆದಾರ ಪಿ.ಕೆ.ಜಯಕೃಷ್ಣೇಗೌಡರ ಮಗ ಪಿ.ಜೆ.ಕೇಶವಕುಮಾರ್ ನಿರ್ವಹಿಸಿ ನೀರಾವರಿ ಇಲಾಖೆಯಿಂದ ಬಿಲ್ ಪಡೆದುಕೊಂಡಿದ್ದಾರೆ.


ಪಿ.ಕೆ.ಜಯಕೃಷ್ಣೇಗೌಡ ಅವರು ಈ ಹಿಂದೆ ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ವೇಳೆ ನರೇಗಾ ಯೋಜನೆಯ ಮೂಲಕವೂ ಲಕ್ಷಾಂತರ ರೂ. ಸರ್ಕಾರಿ ಹಣ ವ್ಯಯಿಸಿ ಅಭಿವೃದ್ಧಿ ಮಾಡಿದ್ದಾರೆ. ಈ ರೀತಿ ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ಧಿಪಡಿಸಿರುವ ಸಾರ್ವಜನಿಕ ಕೆರೆಯನ್ನು ಈಗ ಗುತ್ತಿಗೆದಾರನ ಕುಟುಂಬದವರು ಅತಿಕ್ರಮಿಸಿ ವಶಪಡಿಸಿಕೊಂಡಿದ್ದಾರೆ.


ಸಾರ್ವಜನಿಕ ಕೆರೆಗೆ ಸಾರ್ವಜನಿಕರು ಬರದಂತೆ ತಂತಿಬೇಲಿ ಹಾಕಿಕೊಂಡಿದ್ದರೂ ನೀರಾವರಿ ಇಲಾಖೆ ಅತಿಕ್ರಮಿತ ಕೆರೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಇದುವರೆಗೂ ಮುಂದಾಗಿಲ್ಲ. ಸದರಿ ಕೆರೆಯನ್ನು ಅತಿಕ್ರಮಣಕಾರರಿಂದ ತೆರವುಗೊಳಿಸಿ ಗ್ರಾಮಸ್ಥರ ಅನುಕೂಲಕ್ಕೆ ಅವಕಾಶ ಕಲ್ಪಿಸುವಂತೆ ನೀರಾವರಿ ಇಲಾಖೆಯ ಮುಂದೆ ರಾಜ್ಯ ರೈತಸಂಘ ಪ್ರತಿಭಟನೆ ಮಾಡಿದ್ದರೂ ನೀರಾವರಿ ಇಲಾಖೆ ಗುತ್ತಿಗೆದಾರನಿಗೆ ಹೆದರಿ ಕುಳಿತಿದೆ. ಜಿಲ್ಲಾಡಳಿತ ಕೂಡ ಕೆರೆ ಅತಿಕ್ರಮಣದ ವಿರುದ್ಧ ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದ ಎಂ.ವಿ.ರಾಜೇಗೌಡ ಸಾರ್ವಜನಿಕ ಆಸ್ತಿಯನ್ನು ರಕ್ಷಿಸದಿದ್ದ ಮೇಲೆ ಇಲಾಖೆಗಳಾದರೂ ಏಕಿರಬೇಕು? ಎಂದು ಪ್ರಶ್ನಿಸಿದರು.


ತಾಲೂಕು ಆಡಳಿತ ತಕ್ಷಣವೇ ಅತಿಕ್ರಮಿತ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸದಿದ್ದರೆ ತಾಲೂಕು ಆಡಳಿತ ಸೌಧದ ಮುಂದೆ ಅಹೋರಾತ್ರಿ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.


ರೈತಸಂಘದ ಮನವಿ ಆಲಿಸಿದ ತಹಸೀಲ್ದಾರ್ ಎಸ್.ಯು.ಅಶೋಕ್, ನಾನು 15 ದಿನಗಳ ಹಿಂದೆ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಶೀಘ್ರದಲ್ಲಿಯೇ ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮಿತ ಕೆರೆಯನ್ನು ಸಾರ್ವಜನಿಕರಿಗೆ ತೆರವುಗೊಳಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಸಾಮಾಜಿಕ ಹೋರಾಟಗಾರ ಜಯಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net