ಕೆಂಪೇಗೌಡ ಕೋಟೆ ಕಂದಕದ ಮಣ್ಣು ತೆರವು ಮಾಡಿ

FotoJet (1)
Published on

 ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಒತ್ತಾಯ

ಮಾಗಡಿ : ನಾಡಪ್ರಭು ಕೆಂಪೇಗೌಡ ಕೋಟೆಯ ನಾಲ್ಕು ದಿಕ್ಕುಗಳಲ್ಲಿಯೂ ಮುಚ್ಚಿರುವ ಕಂದಕದ ಮಣ್ಣನ್ನು ತೆಗೆಸಿ ಕಂದಕ ಮರು ನಿರ್ಮಿಸಬೇಕು ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಾತತ್ವ ಇಲಾಖೆ ಅನುಮತಿ ಪಡೆದು ಕೆಂಪೇಗೌಡರ ಕಾಲದ ಕೋಟೆಯ ಮಾದರಿಯಲ್ಲಿಯೇ ಕೋಟೆ ನಿರ್ಮಾಣವಾಗಬೇಕಿದೆ. ಕೋಟೆಗೆ ಹೆಬ್ಬಾಗಿಲೇ ಕಳೆ ಕಟ್ಟುವುದು. ಸುಂದರವಾದ ಕೋಟೆ ಬಾಗಿಲ ಮೂಲಕವೇ ಎಲ್ಲರೂ ಪ್ರವೇಶ ಮಾಡುವಂತಿರಬೇಕು. ಯಾವುದೇ ಕಾರಣಕ್ಕೂ ಹಣ ದುರ್ಬಳಕೆಗೆ ಅವಕಾಶ ಮಾಡಿಕೊಡಬಾರದು.

ಅಭಿವೃದ್ಧಿ ಹೆಸರಿನಲ್ಲಿ ಕೆಂಪೇಗೌಡ ಪ್ರತಿಮೆಗೆ ಕೈಹಾಕಿದರೆ ಏನಾಗುತ್ತದೆಯೋ ಗೊತ್ತಿಲ್ಲ, ಪುರಸಭೆ ಆವರಣದಲ್ಲಿ ಸ್ವಂತ ಹಣದಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅಲುಗಾಡಿಸಿದರೆ ಮುಂದೆ ಆಗುಹೋಗುಗಳ ಬಗ್ಗೆ ಶಾಸಕರೇ ನೇರಹೊಣೆಗಾರಬೇಕಾಗುತ್ತದೆ ಎಂದರು.

ದಕ್ಷಿಣ ದಿಕ್ಕಿನಲ್ಲಿರುವ ಹೊಂಬಾಳಮ್ಮನಕೆರೆ ಒತ್ತುವರಿ ತೆರವುಗೊಳಿಸಬೇಕು. ಮಾಗಡಿ ಕೆಂಪೇಗೌಡ ಕೋಟೆ ಮರು ನಿರ್ಮಾಣಕ್ಕೆ ಕ್ಯಾಬಿನೆಟ್‌ನಲ್ಲಿ 103 ಕೋಟಿ ರೂ. ಮಂಜೂರು ಮಾಡಿದೆ. ಮೊದಲು ನೀಲಿ ನಕ್ಷೆ ಬೋರ್ಡ್ ಹಾಕಬೇಕು. ಎಷ್ಟು ಹಣ ಖರ್ಚು ಬಿಡುಗಡೆಯಾಗಿದೆ. ಎಷ್ಟು ಖರ್ಚಾಗಿದೆ ಎಂಬ ಫಲಕ ಇರಬೇಕು ಎಂದರು.

ಇಲ್ಲಿಯವರೆವಿಗೂ ಕೆಂಪೇಗೌಡರ ಕೋಟೆಯನ್ನು ಕುರಿ,ಮೇಕೆ ಸಂತೆಗೆ ಬಿಟ್ಟುಕೊಟ್ಟು ಸುಂಕ ವಸೂಲಿ ಮಾಡಿ ಪುರಸಭೆ ಹಣಗಳಿಸಿಕೊಂಡಿದೆ. ಈಗ ಸುಂಕ ವಸೂಲಿ ನಿಲ್ಲಿಸಬೇಕು. ಇದಕ್ಕೂ ಮುನ್ನಾ ಎಲ್ಲರ ಸಲಹೆ ಸೂಚನೆ ಪಡೆದು ಸಂತೆ ಸ್ಥಳ ಬದಲಾವಣೆಯಾಗಬೇಕು. ಪಟ್ಟಣದಲ್ಲಿರುವ ಗಾಂಧಿ ಪ್ರತಿಮೆಗೆ ಧಕ್ಕೆಯಾಗದಂತೆ ರಸ್ತೆ ನಿರ್ಮಾಣವಾಗಬೇಕು ಎಂದರು.

ಸರ್ಕಾರವಿದೆ. ಆಡಳಿತ ಪಕ್ಷದಲ್ಲಿದ್ದೇನೆ ಎಂದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದೀರಿ, ಸರ್ವಾಧಿಕಾರ ಹೀಗೆ ಇರುವುದಿಲ್ಲ, ಮಾಗಡಿಯ ಜನತೆ ಅನ್ಯಾಯ ಮಾಡಿದರೆ ಸರ್ವನಾಶವಾಗುತ್ತೀರಿ ಎಂದು ಎಂದು ಕೃಷ್ಣಮೂರ್ತಿ ಶಾಸಕರ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net