ಒತ್ತುವರಿ ಜಾಗ ತೆರವುಗೊಳಿಸಿ ಗಡಿ ಗುರುತಿಸಿ

23 HANUR 4
Published on

 ಹನೂರು: ಒತ್ತುವರಿಯಾಗಿರುವ ಜಾಗವನ್ನು ತೆರೆವುಗೊಳಿಸಲು ಕೈಗೊಂಡಿರುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಗಡಿ ಗುರುತಿಸಿಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸೂಚಿಸಿದರು.

ಕ್ಷೇತ್ರ ವ್ಯಾಪ್ತಿಯ ಉದ್ದನೂರು ಸಮೀಪದ ಹುಬ್ಬೆಹುಣಸೆ ದೊಡ್ಡಕೆರೆಗೆ ಶುಕ್ರವಾರ ಭೇಟಿ ನೀಡಿ ಕೈಗೊಂಡಿರುವ ಒತ್ತುವರಿ ತೆರೆವು ಕಾರ್ಯವನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಹುಬ್ಬೆಹುಣಸೆ ದೊಡ್ಡಕೆರೆಯು 132 ಎಕರೆ ಪ್ರದೇಶವನ್ನು ಹೊಂದಿದ್ದು, 900 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಕೆಲವರು ಕೆರೆಯ ಜಾಗವನ್ನು ಅಕ್ರಮಿಸಿಕೊಂಡಿದ್ದರು. ಇದರಿಂದ ನೀರು ಸಂಗ್ರಹಣೆಗೆ ತೊಡುಕಾಗಿದೆ. ಈ ಹಿನ್ನೆಲೆ ಈಗಾಗಲೇ ಭೂ ಮಾಪನ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೇ ಕಾರ್ಯ ನಡೆಸಿದ್ದು, ಒತ್ತುವರಿ ಜಾಗ ತೆರೆವು ಕಾರ್ಯವನ್ನು ಆರಂಭಿಸಿರುವುದು ಉತ್ತಮವಾದ ಕಾರ್ಯ. ಈ ಕೆಲಸ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಹಾಗೆಯೇ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯವನ್ನು ಒದಗಿಸುವ ಉದ್ದೇೀಶದಿಂದ ಹುಬ್ಬೆಹುಣಸೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಲು ಅಗತ್ಯ ಕ್ರಮವಹಿಸಲಾಗಿದ್ದು, 17 ಕಿ.ಮೀ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಳ್ಳಲು ಅನುದಾನಕ್ಕಾಗಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಕಾರ್ಯ ಅನುಷ್ಠಾನಕ್ಕೆ ಬರಲಿದೆ. ಇನ್ನು ರಾಮನಗುಡ್ಡೆ ಕೆರೆಗೂ ನದಿ ಮೂಲದಿಂದ ನೀರು ತುಂಬಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಜತೆಗೆ ಕ್ಷೇತ್ರ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೂ ಗಮನಹರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಎಇಇ ಕರುಣಾಮಯಿ, ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜು, ಮುಖಂಡರಾದ ವಿಜಯಕುಮಾರ್, ನಟರಾಜೇಗೌಡ, ರಾಜಣ್ಣ, ಚಿನ್ನವೆಂಕಟ, ಉದ್ದನೂರು ಗಿರೀಶ್, ಗೋಪಾಲನಾಯಕ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net