

ಶ್ರವಣಬೆಳಗೊಳ: ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ನೈರ್ಮಲ್ಯ ಆಂದೋಲನ, ನಿರ್ಮಲ ಭಾರತ, ಸ್ವಚ್ಛ ಭಾರತ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಂದು ದೇಶದ ಪ್ರಗತಿಗೆ ಸ್ವಚ್ಛತೆಯೂ ಕಾರಣ ಎಂಬ ಸಂದೇಶ ಸಾರಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಹೇಳಿದರು.
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಸ್ವಚ್ಛತಾ ಇ ಆಂದೋಲನ ಕಾರ್ಯಕ್ರಮದಲ್ಲಿ ಗುರುವಾರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಛತೆಯ ಬಗ್ಗೆ ನಾವು ಜವಾಬ್ದಾರಿ ವಹಿಸಬೇಕು. ಇಲ್ಲದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಕೊಳಕು, ಅನೈರ್ಮಲ್ಯ ಸ್ಥಿತಿಯನ್ನು ತೊಡೆದುಹಾಕಿ ಸಂಪೂರ್ಣ ಸ್ವಚ್ಛತೆ ಹಾಗೂ ನೈರ್ಮಲ್ಯ ಸಾಧಿಸಲು ಸ್ವಚ್ಛ ಭಾರತ ಮಿಷನ್ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ವೈಯಕ್ತಿಕ ನೈರ್ಮಲ್ಯ, ಶುಚಿತ್ವ ಕಾಪಾಡುವುದು, ಗ್ರಾಮೀಣ ಸಮುದಾಯಕ್ಕೆ ನೈರ್ಮಲ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ನಿಯಂತ್ರಣಗೊಳಿಸುವುದು, ಗ್ರಾಮದ ಬೀದಿಗಳು, ಚರಂಡಿಗಳನ್ನು ಶುಚಿಯಾಗಿಡುವುದು, ಎಲ್ಲ ಕುಟುಂಬಗಳಿಗೂ ಶೌಚಗೃಹ ನಿರ್ಮಿಸಿಕೊಂಡು ಬಳಸುವಂತೆ ಅರಿವು ಮೂಡಿಸುವುದು ಹಾಗೂ ಬಯಲು ಮಲ ವಿಸರ್ಜನೆ ಮುಕ್ತ ಮಾಡುವುದು, ಮಕ್ಕಳ ವೈಯಕ್ತಿಕ ನೈರ್ಮಲ್ಯದ ಕಡೆ ಗಮನ ಹರಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಪೂರಕ ನೈರ್ಮಲ್ಯದ ವ್ಯವಸ್ಥೆ ಕಲ್ಪಿಸಿ ಗ್ರಾಮೀಣ ಜನರ ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಣೆ ಮಾಡುವುದು, ಕುಡಿಯುವ ನೀರು ಹಾಗೂ ಆಹಾರ ಕಲುಷಿತಗೊಳ್ಳುವುದನ್ನು ತಡೆಯುವುದು ಸ್ವಚ್ಛ ಭಾರತ ಮಿಷನ್ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಲೋಕೇಶ್, ಉಪಧ್ಯಕ್ಷೆ ರಾಧಾ ಬಸವರಾಜ್, ಸದಸ್ಯರಾದ ಎನ್.ಆರ್.ವಾಸು, ಸಂಜಿತಾ ರೂಪೇಶ್, ಮೋಹನಕುಮಾರಿ, ಚಂದ್ರು, ಕೃಷ್ಣಮೂರ್ತಿ, ರಘು, ಅಫ್ತಾಬ್ ಪಾಷ, ಭಾರತಿ ಚಂದ್ರು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್ ಮುಂತಾದವರಿದ್ದರು.