ಹರೇಕಳದಲ್ಲಿ ಎನ್ನೆಸ್ಸೆಸ್‌ನಿಂದ ಸ್ವಚ್ಛತೆ : ಒಂದು ಕಿ.ಮೀ. ವ್ಯಾಪ್ತಿಯಲ್ಲಿ 35 ಗೋಣಿಚೀಲ ತ್ಯಾಜ್ಯ ಸಂಗ್ರಹ!

harekala
ಹರೇಕಳ ಗ್ರಾಪಂನಿಂದ ಎನ್ನೆಸ್ಸೆಸ್ ಸಹಕಾರದಲ್ಲಿ ರಸ್ತೆಬದಿ ಸ್ವಚ್ಛತಾ ಶ್ರಮದಾನ ಶುಕ್ರವಾರ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಸಂಬಂಧಿಸಿ ‘ವಿಜಯವಾಣಿ’ಯಲ್ಲಿ ಪ್ರಕಟವಾಗುತ್ತಿರುವ ಸರಣಿ ವರದಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದಂತೆ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದು, ಶುಕ್ರವಾರ ಹರೇಕಳ ಗ್ರಾಪಂನಿಂದ ಶ್ರಮದಾನ ನಡೆಯಿತು.

ಕುರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ನ್ಯೂಪಡ್ಪು ಶಾಲೆಯಲ್ಲಿ ಆರಂಭಗೊಂಡಿದೆ. ಅದರ ಪ್ರಯುಕ್ತ ಗ್ರಾಪಂನಿಂದ ಎನ್ನೆಸ್ಸೆಸ್ ಸಹಕಾರದಲ್ಲಿ ಶುಕ್ರವಾರ ನ್ಯೂಪಡ್ಪು ಜಂಕ್ಷನ್‌ನಿಂದ ಗ್ರಾಮಚಾವಡಿವರೆಗೆ ರಸ್ತೆಬದಿ ಸ್ವಚ್ಛತಾ ಶ್ರಮದಾನ ನಡೆಯಿತು. ಗ್ರಾಮದಲ್ಲಿ ಕಸ ಸಂಗ್ರಹ ವ್ಯವಸ್ಥೆ ಇದ್ದರೂ ಕೇವಲ ಒಂದು ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 35 ಗೋಣಿಚೀಲ ತ್ಯಾಜ್ಯ ಸಂಗ್ರಹಿಸಲಾಗಿದೆ..!

ಹರೇಕಳ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣವಿದ್ದು ಸ್ವಚ್ಛ ವಾಹಿನಿ ವಾಹನ ಇದೆ. ಮನೆಗಳಿಂದ ಕಸ ಸಂಗ್ರಹ ನಡೆಯುತ್ತಿದ್ದರೂ ಆಸುಪಾಸಿನ ಗ್ರಾಮದ ಜನರು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹರೇಕಳ ಗ್ರಾಮ ವ್ಯಾಪ್ತಿಯ ರಸ್ತೆಬದಿ ಎಸೆದು ಹೋಗುವುದರಿಂದ ರಸ್ತೆಯುದ್ದಕ್ಕೂ ತ್ಯಾಜ್ಯ ಶೃಂಗಾರ ಕಂಡು ಬರುತ್ತಿದ್ದು, ಪಂಚಾಯಿತಿಗೆ ತಲೆನೋವಾಗಿದೆ. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಉಳ್ಳಾಲ ತಾಲೂಕಿನಾದ್ಯಂತ ರಸ್ತೆಗಳು ತ್ಯಾಜ್ಯ ತೊಟ್ಟಿ ಆಗಿರುವ ಬಗ್ಗೆ ಪ್ರಕಟಗೊಂಡ ವರದಿ ಹಿನ್ನೆಲೆಯಲ್ಲಿ ತಾಪಂ ಮುಖ್ಯಾಧಿಕಾರಿ ಸಭೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಶುಕ್ರವಾರ ಹರೇಕಳದಲ್ಲಿ ನಡೆದ ರಸ್ತೆಬದಿ ಸ್ವಚ್ಛತಾ ಶ್ರಮದಾನದಲ್ಲಿ ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಮಜೀದ್, ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಡಿ., ಎನ್ನೆಸ್ಸೆಸ್ ಯೋಜನಾಧಿಕಾರಿ ಶೋಭಾಮಣಿ, ಸಹಶಿಬಿರಾಧಿಕಾರಿ ಪ್ರದೀಪ್ ಬಂಗೇರ, ಗ್ರಾಪಂ ಕಾರ್ಯದರ್ಶಿ ತಾರಾಕ್ಷಿ, ಸಿಬ್ಬಂದಿ ಜಯಶ್ರೀ, ನಾಝಿಂ, ಸರಿತಾ, ಹೇಮಲತಾ ಭಾಗವಹಿಸಿದ್ದರು. ತಾಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶೈಲಜಾ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಇದ್ದರು.

ಶಾಲೆ, ಅಂಗನವಾಡಿ, ರಸ್ತೆ, ಕಟ್ಟಡ ಮಾತ್ರ ಅಭಿವೃದ್ಧಿ ಅಲ್ಲ. ಪರಿಸರದೊಂದಿಗೆ ಬೆಳೆದಾಗ ಅಭಿವೃದ್ಧಿ ಕಾಣಲು ಸಾಧ್ಯ. ಗ್ರಾಪಂಗಳಲ್ಲಿ ಕಸ ಸಂಗ್ರಹದ ವ್ಯವಸ್ಥೆ ಇದ್ದರೂ ನದಿ, ರಸ್ತೆಬದಿ ಕಸ ಎಸೆಯುವುದು ನಿಂತಿಲ್ಲ. ಮಳೆ ಬಂದಾಗ ಚರಂಡಿ, ಕಾಲುವೆಯಲ್ಲಿ ಕೊಚ್ಚಿಹೋಗುವ ತ್ಯಾಜ್ಯ ನದಿ, ಸಮುದ್ರ ಸೇರಿ ಅನಾಹುತಗಳಿಗೆ ಕಾರಣವಾಗುತ್ತವೆ.- ಶೈಲಜಾ,ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಳ್ಳಾಲ ತಾಪಂ ವಿಜಯವಾಣಿಯಲ್ಲಿ ಪ್ರಕಟಗೊಂಡ ವರದಿ, ಜಿಪಂ ಅಧಿಕಾರಿಗಳ ನಿರ್ದೇಶನ ಮೇರೆಗೆ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಹಕಾರದಲ್ಲಿ ಹರೇಕಳ ಗ್ರಾಮದ ರಸ್ತೆಬದಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಇದು ಕಾಟಾಚಾರಕ್ಕೆ ಆಗದೆ ಮಾದರಿ ಆಗಬೇಕೆನ್ನುವ ನಿಟ್ಟಿನಲ್ಲಿ ನ್ಯೂಪಡ್ಪು ಜಂಕ್ಷನ್‌ನಿಂದ ಗ್ರಾಮಚಾವಡಿವರೆಗೆ ಪ್ರಾಮಾಣಿಕ ನೆಲೆಯಲ್ಲಿ ಸ್ವಚ್ಛತೆ ಮಾಡಲಾಗಿದೆ.- ಮುತ್ತಪ್ಪ ಡಿ.ಅಭಿವೃದ್ಧಿ ಅಧಿಕಾರಿ, ಹರೇಕಳ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net