ಬಿಜೆಪಿಯಲ್ಲೂ ಗಾಡ್ ಫಾದರ್ ಸಂಸ್ಕೃತಿ ರಘುಪತಿ ಭಟ್ ಹೇಳಿಕೆ

mng-may18-raghupathi bhatt2
Published on

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಾಮಾಣಿಕ, ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾದರೂ ಮತ ಹಾಕುತ್ತಾರೆ ಎನ್ನುವ ಭ್ರಮೆ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗಿದೆ. ಇದರ ಅರಿವು ಮಾಡಿಕೊಡುವ ಉದ್ದೇಶದಿಂದ ರಾಜ್ಯ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕೆ.ರಘುಪತಿ ಭಟ್ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಟು ಘೋಷಣೆಯಾದಾಗ ಕೊನೇ ಕ್ಷಣದ ತನಕ ಭರವಸೆ ನೀಡಿ ಅನ್ಯಾಯ ಮಾಡಿದ್ದಾರೆ. ಎಲ್ಲಾ ಅರ್ಹತೆ, ಹಿರಿತನ ಇದ್ದರೂ ಟಿಕೆಟ್ ನೀಡದೆ ಅವಮಾನ ಮಾಡಿದ್ದಾರೆ. ಈ ಮೂಲಕ ಕರಾವಳಿಯ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷೃ ಮಾಡಿದ್ದಾರೆ. ನಾನು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರೂ ಬಿಜೆಪಿಯ ಜತೆಗಿದ್ದೇನೆ ಎಂದವರು ಹೇಳಿದರು.


ಗಾಡ್ ಫಾದರ್ ಸಂಸ್ಕೃತಿ: ಅಭ್ಯರ್ಥಿ ಆಯ್ಕೆ ಹಿಂದಿನಂತೆ ಈಗ ನಡೆಯುತ್ತಿಲ್ಲ. ಕಾಂಗ್ರೆಸ್‌ನಂತೆ ಬಿಜೆಪಿಯಲ್ಲೂ ಆಗಿದೆ. ಗಾಡ್ ಫಾದರ್ ಸಂಸ್ಕೃತಿ ಹುಟ್ಟಿಕೊಂಡಿದೆ. ಇದು ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡಿದ ಕಾರ್ಯಕರ್ತರ ನೋವಿಗೆ ಕಾರಣವಾಗುತ್ತಿದೆ. ಬಿಜೆಪಿ ಪಕ್ಷಕ್ಕೆ ಇಂತಹ ಚಟುವಟಿಕೆಗಳು ಕಳಂಕ ಎಂದರು.


ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿರುವ ಅನುಭವದ ಹಿನ್ನೆಲೆಯಲ್ಲಿ ಜನರು ನನ್ನ ಮೇಲಿಟ್ಟಿರುವ ವಿಶ್ವಾಸದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ. ಪದವೀಧರರಿಗೆ ಪದವಿಯ ನಂತರ ಕಾಡುವ ಉದ್ಯೋಗಕ್ಕೆ ನೆಟ್ವರ್ಕ್ ಡಾಟಾಬೇಸ್‌ಗಳ ಸ್ಥಾಪನೆ, ಸರ್ಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯಲ್ಲಿ ಫಲಿತಾಂಶಗಳ ಪ್ರಕಟ ಹಾಗೂ ಕ್ಷಿಪ್ರ ನೇಮಕಾತಿಗೆ ಒತ್ತಾಯ. ಪದವೀಧರರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಮುಂತಾದುವುಗಳ ಸರ್ಕಾರಿ ಸಹಾಯಗಳಿಗೆ ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಒಂದು ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀಧರರಿಗೆ ಪೂರಕ ಉದ್ಯಮ ವಲಯದ ಸೃಷ್ಟಿಗೆ ಕ್ರಮಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದವರು ಭರವಸೆ ನೀಡಿದರು.
ಡಾ.ಶಿವಶರಣ್ ಶೆಟ್ಟಿ, ನವೀನ್‌ಚಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net