

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ಹಾಗೂ ಸ್ನಾನಘಟ್ಟದಲ್ಲಿ ಸಾವಿರಾರು ಬಟ್ಟೆಬರೆಗಳು ಬಿದ್ದಿದ್ದವು. ಇದನ್ನು ಕಂಡ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸುಬ್ರಹ್ಮಣ್ಯದ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯ ನೆರವೇರಿಸಿದರು.
ನದಿಯಲ್ಲಿ ಇಳಿದು ನೀರಿನ ಆಳದಲ್ಲಿ ಇದ್ದ ರಾಶಿ ರಾಶಿ ಬಟ್ಟೆಗಳನ್ನು ಹೆಕ್ಕಿದರು. ತಳಭಾಗದಲ್ಲಿ ಬಿದ್ದಿದ್ದ ಸಾವಿರಾರು ಬಟ್ಟೆಗಳನ್ನು ಮೇಲಕ್ಕೆ ತಂದ ಸ್ವಯಂಸೇವಕರು ಟ್ರ್ಯಾಕ್ಟರ್‌ನಲ್ಲಿ ತುಂಬಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ದರು. ಭಕ್ತಾದಿಗಳು ತೀರ್ಥ ಸ್ನಾನ ಮಾಡಿದ ಬಳಿಕ ಬಟ್ಟೆಗಳನ್ನು ನದಿಯಲ್ಲಿ ಬಿಡುತ್ತಿರುವುದು ಶೋಚನೀಯ.
ಶ್ರೀ ದೇವಳದಿಂದ ಧ್ವನಿವರ್ಧಕದ ಮೂಲಕ ಈ ಬಗ್ಗೆ ಎಚ್ಚರಿಕೆ ನೀಡಿದರೂ ಭಕ್ತರು ತಮ್ಮ ಚಾಳಿಯನ್ನು ಮುಂದುವರಿಸಿರುವುದು ವಿಷಾದನೀಯ. ಮುಂದೆ ಶ್ರೀ ದೇವಳದಿಂದ ಈ ರೀತಿ ಬಟ್ಟೆಯನ್ನು ನದಿಗೆ ಎಸೆಯುವವರಿಗೆ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು.
ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.