ಸ್ವಚ್ಛವಾಯಿತು ವಾಣಿಜ್ಯ ಸಂಕೀರ್ಣ: ಎರಡನೇ ಅಂತಸ್ತಿಗೆ ಬೀಗ : ಶೌಚಗೃಹ ಸುತ್ತಮುತ್ತ ಕ್ಲೀನಿಂಗ್

New Project (47)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕಳೆದ ಆರು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇರುವ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಎರಡನೇ ಅಂತಸ್ತು ಹಾಗೂ ಹಿಂಬದಿಯ ಸುಲಭ ಶೌಚಗೃಹ ಪರಿಸರದ ಅವ್ಯವಸ್ಥೆ, ಕೊಳಕು ಪರಿಸರದ ಕುರಿತು ವಿಜಯವಾಣಿ ಪತ್ರಿಕೆ ವರದಿ ಪ್ರಕಟಿಸಿದ್ದು, ಇದಕ್ಕೆ ಸ್ಪಂದಿಸಿದ ಪುರಸಭೆ ಸಿಬ್ಬಂದಿ ಪರಿಸರ ಸ್ವಚ್ಛಗೊಳಿಸಿದ್ದಾರೆ.

ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ ಖುದ್ದು ಸ್ಥಳ ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಶುಚಿಗೊಳಿಸುವಂತೆ ಪೌರಕಾರ್ಮಿಕರಿಗೆ ನಿರ್ದೇಶಿಸಿದರು. ಕಳೆದ ನಾಲ್ಕು ದಿನಗಳಿಂದ ಪೌರಕಾರ್ಮಿಕರು ಪರಿಸರ ಶುಚಿಗೊಳಿಸಿದ್ದಾರೆ. ವಾಣಿಜ್ಯ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ಎಸೆದಿರುವ ಮದ್ಯದ ಬಾಟಲಿ, ತ್ಯಾಜ್ಯ ತೆಗೆದು, ಗೇಟಿಗೆ ಬೀಗ ಹಾಕಲಾಗಿದೆ. ಮೊದಲನೇ ಅಂತಸ್ತಿನ ಮೆಟ್ಟಿಲುಗಳನ್ನು ಶುಚಿಗೊಳಿಸಲಾಗಿದೆ. ಗುಜರಿ ಶೇಖರಣೆ ಸ್ಥಳವಾಗಿ ಮಾರ್ಪಾಡಾಗಿದ್ದ ಶೌಚಗೃಹ ಮುಂಭಾಗ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಶುಚಿಗೊಳಿಸಲಾಗಿದೆ. ಸುತ್ತಮುತ್ತ ಬೆಳೆದ ಹುಲ್ಲು ತೆಗೆಯಲಾಗಿದೆ. ಸುತ್ತಮುತ್ತ ಹರಡಿದ್ದ ಮದ್ಯ ಬಾಟಲಿಗಳನ್ನು ತೆರವುಗೊಳಿಸಿ ಶುಚಿಗೊಳಿಸಲಾಗಿದೆ.

ವಿಶೇಷ ವರದಿ ಪರಿಣಾಮ

ಕಾಮಗಾರಿ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದ ಎರಡನೇ ಅಂತಸ್ತು ಮದ್ಯಪಾನ, ಧೂಮಪಾನದಂತಹ ದುಶ್ಚಟಗಳ ತಾಣವಾಗುತ್ತಿರುವುದು, ಅಲ್ಲೇ ಕುಡಿದು ಮಲಗುವುದು, ಕೊಳಕು ಮಾಡುವುದು, ಕಸ ರಾಶಿ ಹಾಕಿರುವುದರ ಬಗ್ಗೆ ವಿಜಯವಾಣಿಯಲ್ಲಿ ಜುಲೈ 16ರಂದು ವಿಶೇಷ ವರದಿ ಪ್ರಕಟವಾಗಿತ್ತು. ಸಂಕೀರ್ಣದ ಹಿಂಬದಿಯಲ್ಲಿರುವ ಶೌಚಗೃಹ ಪರಿಸರದಲ್ಲಿ ರಾಶಿ ಬಿದ್ದಿರುವ ಮದ್ಯ, ಗುಜರಿ ವಸ್ತುಗಳ ಶೇಖರಣೆ ಕುರಿತು ಕೂಡ ಬೆಳಕು ಚೆಲ್ಲಿತ್ತು. ಇಲ್ಲಿನ ಅವ್ಯವಸ್ಥೆ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಸುರೇಶ್ ಕೋಟ್ಯಾನ್, ಶ್ವೇತಾ ಪ್ರವೀಣ್ ಪ್ರಸ್ತಾಪಿಸಿದ್ದರು.

ಪಾರ್ಕಿಂಗ್‌ಗೆ ಅವಕಾಶ

ಶೌಚಗೃಹದ ಮುಂಭಾಗ ಹಾಗೂ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ವಾಣಿಜ್ಯ ಸಂಕೀರ್ಣದ ಅಂಗಡಿಯವರು, ಸಿಬ್ಬಂದಿಯ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಇದೀಗ ಸುತ್ತಮುತ್ತ ಶುಚಿಗೊಳಿಸಿರುವುದರಿಂದ ಹೆಚ್ಚಿನ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ಸಿಕ್ಕಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net