ಪರಿಸರ ಸ್ವಚ್ಛವಾಗಿದ್ದರೆ ರೋಗಗಳು ನಿಯಂತ್ರಣ

28blrp2
Published on

ಬೇಲೂರು: ಸುತ್ತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಂಡಾಗ ಮಾತ್ರ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಘೆ, ಚಿಕೂನ್ ಗುನ್ಯಾದಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ಸಲಹೆ ನೀಡಿದರು.


ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಡೆಂಘೆ ನಿಯಂತ್ರಣದ ಬಗ್ಗೆ ತಾಪಂ ಇಒ ಸತೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಡೆಂೆ ಮತ್ತು ಚಿಕೂನ್ ಗುನ್ಯಾ ವೈರಸ್‌ನಿಂದ ಹರಡುತ್ತದೆ. ಹಗಲು ವೇಳೆ ವೈರಸ್ ಸೋಂಕಿತ ಈಡೀಸ್ ಸೊಳ್ಳೆ ಮನುಷ್ಯರಿಗೆ ಕಚ್ಚುವುದರಿಂದ ಡೆಂಘೆ ಹರಡುತ್ತದೆ. ವಿಪರೀತ ಜ್ವರ, ತಲೆನೋವು, ಮಾಂಸ ಖಂಡ ಹಾಗೂ ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿಯಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.


ಕೀಟ ಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ ಮಾತನಾಡಿ, ಡೆಂೆ ಮತ್ತು ಚಿಕೂನ್ ಗುನ್ಯಾದಂತಹ ರೋಗ ಹರಡಲು ಪ್ರಮುಖವಾಗಿ ಮನೆಯಲ್ಲಿ ಶೇಖರಣೆ ಮಾಡುವ ಸ್ವಚ್ಛ ನೀರಿನಲ್ಲಿ ಈಡೀಸ್ ಸೊಳ್ಳೆಗಳು ಉತ್ಪತ್ತಿಯೇ ಕಾರಣ. ಇದನ್ನು ತಡೆಗಟ್ಟಬೇಕೆಂದರೆ ಪ್ರತಿಯೊಬ್ಬರೂ ಮನೆಯ ಡ್ರಮ್, ಬ್ಯಾರೆಲ್, ತೊಟ್ಟಿಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿದ ನಂತರ ನೀರು ತುಂಬಿಸಿ ಮುಚ್ಚಬೇಕು. ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳ ಒಳಾಂಗಣ ಮತ್ತು ಹೊರಾಂಗಣದಲ್ಲಿ ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಹಾಗೂ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.


ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ಸೊಳ್ಳೆಯಿಂದ ಪಾರಾಗಲು ವೃದ್ಧರು ಮತ್ತು ಮಕ್ಕಳು ಡೆಂಘೆ ಮತ್ತು ಚಿಕೂನ್ ಗುನ್ಯಾದಂತಹ ಕಾಯಿಲೆ ಇರುವವರು ತಪ್ಪದೆ ಸೊಳ್ಳೆ ಪರದೆ ಉಪಯೋಗಿಸಬೇಕು. ಮಳೆಗಾಲ ಪ್ರಾರಂಭವಾಗಿರುವುದರಿಂದ ಪ್ರತಿಯೊಬ್ಬರೂ ಪರಿಸರದ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.


ತಾಒಂ ಇಒ ಸತೀಶ್, ಸಹಾಯಕ ನಿರ್ದೇಶಕರಾದ ದಯಾನಂದ್, ಗುರುಪ್ರಸಾದ್, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಆರೋಗ್ಯ ನಿರೀಕ್ಷಣಾಧಿಕಾರಿ ಹಕ್ಯಣ್ಣ, ಪಿಡಿಒಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net