

ಎಂ.ಎಸ್. ಹಿರೇಮಠ ಬೆಳಗಾವಿ
ಬೇಸಿಗೆ ಮುನ್ನವೇ ಈ ಸಾರಿ ಬಿಸಿನ ಪ್ರಖರತೆ ಅಕವಾಗಿದೆ. ಇದರಿಂದಾಗಿ ಮನೆಯಲ್ಲಿ ಮಣ್ಣಿ ಮಡಕೆ ಇದ್ದರೆ ಉತ್ತಮ ಎಂದು ಜನರು ಮಣ್ಣಿನ ಮಡಿಕೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಮಣ್ಣಿನ ಮಡಕೆಗಳಿಗೆ ಭಾರೀ ಡಿಮಾಂಡ್ ಹೆಚ್ಚಿದ್ದು, ಕುಂಬಾರರಿಗೆ ಆದಾಯ ಉತ್ತಮ ಆದಾಯ ತಂದುಕೊಡುತ್ತಿದೆ.
ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್‌ಗಳ ಅಬ್ಬರದ ಮಧ್ಯೆಯೂ ಮಣ್ಣಿನ ಮಡಕೆ ಅಸ್ತಿತ್ವ ಉಳಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ದೇಸಿ ವಸ್ತುಗಳ ಬಳಕೆ ಹೆಚ್ಚುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ಪ್ರಿಡ್ಜ್‌ಗಿಂತ ಮಣ್ಣಿನ ಮಡಕೆಯ ತಂಪು ನೀರೇ ಲೇಸು ಎಂಬುದು ಜನರಿಗೆ ಮನದಟ್ಟಾಗಿದೆ. ಹೊಟ್ಟೆ ತಣ್ಣಗಾಗಿಸಲು ಮತ್ತು ದಣಿವು ನಿವಾರಣೆಗೆ ತಂಪು ನೀರು ಬಯಸುತ್ತಾರೆ. ಬೇಸಿಗೆಯಲ್ಲಿ ಕೃತಕ ತಂಪು ಪಾನೀಯಕ್ಕಿಂತ ನೈಸರ್ಗಿಕವಾಗಿ ನೀರು ತಂಪಾಗಿಸುವ ಮಣ್ಣಿನ ಮಡಿಕೆಗೆ ಇದೀಗ ಜಿಲ್ಲಾದ್ಯಂತ ಭಾರಿ ಬೇಡಿಕೆ ಹೆಚ್ಚಿದ್ದು, ಕುಂಬಾರರಿಗೆ ಶುಕ್ರದೆಸೆ ಒದಗಿ ಬಂದಿದೆ.
ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ: ಜಿಲ್ಲೆಯ ಖಾನಾಪುರ, ಸವದತ್ತಿ, ಬೈಲಹೊಂಗಲ ವಿವಿಧೆಡೆಯಿಂದ ಬಂದಿರುವ ಸ್ಥಳೀಯ ಮಡಕೆಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ಅಸ್ಸಾಂ, ಗುಜರಾತ, ಪಶ್ಚಿಮ ಬಂಗಾಳ ಹಾಗೂ ಅಹಮದಾಬಾದ್ ನಗರಗಳಿಂದ ತರಹೇವಾರಿ ಮಣ್ಣಿನ ಮಡಕೆಗಳು ಕುಂದಾನಗರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸುಮಾರು 10-20 ಲೀ. ಸಾಮರ್ಥ್ಯದ ನಲ್ಲಿ ಅಳವಡಿಸಿದ ಮಡಿಕೆಗಳು 300-700 ರೂ. ಬೆಲೆ ಹೊಂದಿವೆ. ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆಗಳು ನಿಗದಿಯಾಗಿವೆ. ಏನೇ ಆದರೂ ಜನರು ಬೆಲೆ ನೋಡದೇ ಮಣ್ಣಿನ ಮಡಕೆಗಳ ಖರೀದಿ ಮಾಡುತ್ತಿದ್ದಾರೆ.
ದೀಪಾವಳಿ, ಯುಗಾದಿ ಸಮಯದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಉತ್ತಮ ವ್ಯಾಪಾರ ಇರುತ್ತದೆ. ಉಳಿದ ದಿನಗಳಲ್ಲಿ ವ್ಯಾಪಾರ-ವಹಿವಾಟು ಸಾಧಾರಣ ಗತಿಯಲ್ಲಿದ್ದು, ಮತ್ತೆ ಮೇ ತಿಂಗಳವರೆಗೆ ಮಣ್ಣಿನ ಮಡಕೆಗಳಿಗೆ ಬೇಡಿಕೆ ದ್ವಿಗುಣಗೊಳ್ಳುವುದರಿಂದ ಚೆನ್ನಾಗಿ ವ್ಯಾಪಾರ ಕುದುರುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.
ತಾಂತ್ರಿಕತೆ ಹೆಚ್ಚಿದಂತೆ ಮಣ್ಣಿನಿಂದ ಮಾಡಿದ ವಸ್ತುಗಳು ಕಣ್ಮರೆಯಾಗುತ್ತಿವೆ. ಇದರಿಂದ ಕುಂಬಾರಿಕೆ ಕೂಡ ನಶಿಸುತ್ತಿದೆ. ಆದರೆ, ಎಷ್ಟೇ ಶತಮಾನಗಳು ಆದರೂ ಮಣ್ಣಿನ ಮಡಿಕೆಗಳು ಮಾತ್ರ ಜನರ ಮನದಲ್ಲಿ ಇನ್ನೂ ಸ್ಥಾನ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಕೆಲ ಕುಂಬಾರಿಕೆ ಕುಟುಂಬಗಳು ಇಂದಿಗೂ ಮೂಲ ಕಸಬು ಕೈಗೊಂಡು ಪೂರ್ವಜರ ಪರಂಪರೆ ಜೀವಂತವಾಗಿಸಿವೆ.
ನಾಲ್ಕು ತಲೆಮಾರುಗಳಿಂದ ನಮ್ಮ ಕುಟುಂಬ ಮಣ್ಣಿನ ಮಡಕೆ ವ್ಯಾಪಾರದಲ್ಲಿ ತೊಡಗಿದೆ. 40 ವರ್ಷಗಳಿಂದ ನಾನು ಮಡಕೆ ವ್ಯಾಪಾರ ಮಾಡುತ್ತಿದ್ದೇನೆ. ಬೇಸಿಗೆ ಬಿಸಿಲು ಹೆಚ್ಚಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಣ್ಣಿನ ಮಡಕೆ ಖರೀದಿಸುತ್ತಿದ್ದಾರೆ. ವ್ಯಾಪಾರ ಉತ್ತಮವಾಗಿದೆ.
| ವಿನಾಯಕ ಗುಂಜಿಕರ್, ಮಡಕೆ ವ್ಯಾಪಾರಿ ಬೆಳಗಾವಿ
ಪ್ರಿಡ್ಜ್‌ಗಿಂತ ಮಣ್ಣಿನ ಮಡಕೆಯಲ್ಲಿನ ನೀರು ತಂಪಾಗಿರುವ ಜತೆಗೆ ಆರೋಗ್ಯಕ್ಕೆ ಹಿತವಾಗಿದೆ. ರಾಜಸ್ಥಾನದ ನಮ್ಮ ಮನೆಯಲ್ಲಿ ಎಲ್ಲ ದೊಡ್ಡ ಗಾತ್ರದ ಮಡಕೆಯಲ್ಲಿ ನೀರು ಸಂಗ್ರಹಿಸಿ, ಮೊದಲಿನಿಂದಲೂ ನಾವು ಮಡಕೆಯಲ್ಲಿನ ನೀರು ಕುಡಿಯುತ್ತೇವೆ.
| ಕೈಲಾಶ್ ಜೈನ್, ಗ್ರಾಹಕ