ಶಾಲೆಗೆ ಬಂದರೆ ಪ್ರಾಣ ಕಳೆದುಕೊಳ್ಳೋ ಭೀತಿ! ಬಾದಾಮಿಯ ಈ ಗ್ರಾಮದ ವಿದ್ಯಾರ್ಥಿಗಳಿಗೆ ಇದೆಂಥ ದುರ್ಗತಿ?

New Project (6)
Published on

ಬಾಗಲಕೋಟೆ: ಅಸ್ಥಿ ಪಂಜರದಂತಿರುವ ಶಾಲಾ ಕೊಠಡಿಗಳು, ತಗಡಿನ ಶೆಡ್​​ನಲ್ಲಿ ಆಟ ಆಡುವ ಮಕ್ಕಳು, ಕಿತ್ತು ಬರುತ್ತಿರುವ ಶಾಲೆಯ ಹಂಚುಗಳು, ಬಯಲಿನಲ್ಲೇ ಮಕ್ಕಳಿಗೆ ಪಾಠ, ಬಿಸಿಲು ಮಳೆಯಲ್ಲಿ ಮಕ್ಕಳ ಪರದಾಟ... ಇದು ಪ್ರವಾಹ ಪೀಡಿತ ಗ್ರಾಮವಾದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ತಳಕವಾಡ ಗ್ರಾಮದಲ್ಲಿನ ಸರ್ಕಾರಿ ಶಾಲೆಯೊಂದರ ಕರುಣಾಜನಕ ಕಥೆ.

1912ರಲ್ಲಿ ಈ ಶಾಲೆ ಸ್ಥಾಪನೆ ಆಗಿದ್ದು, 110 ವರ್ಷಗಳ ಇತಿಹಾಸ ಹೊಂದಿದೆ. ಸದ್ಯ ಈ ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೂ 114 ಮಕ್ಕಳು ಓದುತ್ತಿದ್ದಾರೆ. 2009 ಮತ್ತು 2019ರ ಪ್ರವಾಹದಲ್ಲಿ ಶಾಲೆ ಮುಳುಗಿ ಹೋಗಿತ್ತು. ಈಗ ಶಾಲೆಯ ದುಸ್ಥಿತಿ ಕಂಡು ಊರಿನ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಶಾಲೆಯಲ್ಲಿರುವ ಏಳು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಅಪಾಯ ಸಂಭವಿಸಬಹುದೆಂಬ ಕಾರಣದಿಂದ ಮೂರು ಕೊಠಡಿಗಳನ್ನು ಈಗಾಗಲೇ ನೆಲಸಮ ಮಾಡಲಾಗಿದೆ. ಉಳಿದ ನಾಲ್ಕು ಕೊಠಡಿಗಳ ಹಂಚುಗಳು ಕಿತ್ತು ಬರುತ್ತಿವೆ. ಗೋಡೆಗಳು ಬಿರುಕು ಬಿದ್ದಿದ್ದು, ಕಲ್ಲು, ಮಣ್ಣು, ಹಂಚುಗಳು ಕೊಠಡಿಯಲ್ಲಿ ಬೀಳುತ್ತಿವೆ. ಶಾಲಾ ಮೈದಾನಕ್ಕೆ ತಗಡಿನ ಶೆಡ್​ ಹಾಕಲಾಗಿದ್ದು, ಮಳೆ ಬಂದಾಗ ಸೋರುತ್ತಿದೆ. ಶೌಚಾಲಯ ಇಲ್ಲದ್ದರಿಂದ ಮಕ್ಕಳು ಜಮೀನಿಗೆ ಹೋಗಬೇಕಾಗದ ಪರಿಸ್ಥಿತಿಯಿದೆ.

ಅವ್ಯವಸ್ಥೆಯಿಂದ ಕೂಡಿರುವ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಆರ್ಥಿಕವಾಗಿ ಮುಂದಿರುವವರು ತಮ್ಮ ಮಕ್ಕಳನ್ನು ಬೇರೆ ಊರಿಗೆ ಓದಲು ಕಳುಹಿಸುತ್ತಿದ್ದಾರೆ. ಆದರೆ ಬಡವರ ಮಕ್ಕಳಿಗೆ ಈ ಶಾಲೆಗೆ ಬರದೇ ಬೇರೆ ದಾರಿ ಇಲ್ಲ.

ತಳಕವಾಡ ಗ್ರಾಮವನ್ನು ಎಲ್ಲರೂ ಮರೆತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಸುಸುಜ್ಜಿತವಾದ ಶಾಲೆ ಕಟ್ಟಿಸಿಕೊಡಿ ಎಂದು ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ಸಚಿವರನ್ನು ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net