

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಹಿಂದೆ ಯಕ್ಷಗಾನವನ್ನು ಗಂಡು ಕಲೆ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯಕ್ಷ ಧ್ರುವ ಯಕ್ಷ ಶಿಕ್ಷಣದಲ್ಲಿ ಆರೂವರೆ ಸಾವಿರ ಕಲಿಕಾರ್ಥಿಗಳಿದ್ದು ಇದರಲ್ಲಿ ನಾಲ್ಕೂವರೆ ಸಾವಿರ ಮಂದಿ ವಿದ್ಯಾರ್ಥಿನಿಯರು ಎಂಬುದು ಹೆಮ್ಮೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್, ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರ್ ವಾಸುದೇವ ಐತಾಳ್ ಹೇಳಿದರು.
ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಯಕ್ಷ ಧ್ರುವ ಯಕ್ಷ ಶಿಕ್ಷಣ ನಾಟ್ಯ ಅಭ್ಯಾಸ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ ಮಾತನಾಡಿದರು. ಶಾಲಾ ಆಡಳಿತ ಸಮಿತಿ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷ ಶಿಕ್ಷಣ ಪಠ್ಯಪುಸ್ತಕ ಹಸ್ತಾಂತರಿಸಲಾಯಿತು. ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್, ಯಕ್ಷಗಾನ ಗುರು ಈಶ್ವರ ಪ್ರಸಾದ್ ನಿಡ್ಲೆಗೆ ವೀಳ್ಯ ನೀಡಿ ನಾಟ್ಯಾಭ್ಯಾಸಕ್ಕೆ ಚಾಲನೆ ನೀಡಿದರು. ನಿಯೋಜಕಿ ಸ್ವಾತಿ ಕೆ.ವಿ. ವಂದಿಸಿದರು. ಶಿಕ್ಷಕಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.