ಕಾಸರಗೋಡಲ್ಲಿ ಬಿಜೆಪಿ ಪ್ರತಿಭಟನೆ: ನಗರಸಭೆ ಭ್ರಷ್ಟಾಚಾರ ವಿರುದ್ಧ ಆಕ್ರೋಶ : ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

New Project (13)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನಗರಸಭೆಯಲ್ಲಿ ಅಭಿವೃದ್ಧಿ ಕುಂಠಿತ ಹಾಗೂ ಭ್ರಷ್ಟಾಚಾರದಿಂದ ಕೂಡಿದ ಮುಸ್ಲಿಂಲೀಗ್ ನೇತೃತ್ವದ ಐಕ್ಯರಂಗದ ಆಡಳಿತ ವಿರೋಧಿಸಿ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ವತಿಯಿಂದ ನಗರಸಭಾ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಪ್ರತಿಭಟನೆಗೆ ಚಾಲನೆ ನೀಡಿದರು. ನಗರಸಭೆ ಜನವಿರೋಧಿ ಆಡಳಿತ ಖಂಡಿಸಿ ಮಹಿಳೆಯರ ಸಹಿತ ನೂರಾರು ಮಂದಿ ಪ್ರತಿಭಟನಾಕಾರರು ಪೊಲೀಸರ ತಡೆ ಭೇದಿಸಿ ಮುನ್ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಕಾರ್ಯಕರ್ತರನ್ನು ಚದುರಿಸಲು ಯತ್ನಿಸಿದರು.

ನಗರದ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ನಗರದ ವಿವಿಧೆಡೆ ಸಂಚರಿಸಿ ನಗರಸಭಾ ಕಾರ್ಯಾಲಯದ ಗೇಟಿನ ಮುಂಭಾಗ ತಲುಪುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದ್ದರು. ಮಾತಿನ ಚಕಮಕಿ ನಡೆಸಿ ಗೇಟು ಹಾರಿ ಕೆಲವು ಕಾರ್ಯಕರ್ತರು ನಗರಸಭಾ ಕಾರ್ಯಾಲಯ ನುಗ್ಗಲು ಮುಂದಾಗುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು.

ನಗರಸಭಾ ಪ್ರತಿಪಕ್ಷ ಮುಖಂಡ ಪಿ.ರಮೇಶ್, ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸುನೀಲ್, ನಗರಸಭಾ ಸದಸ್ಯ ವರಪ್ರಸಾದ ಕೋಟೆಕಣಿ, ಉಮಾ ಕಡಪ್ಪರ, ಮಂಡಲ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಪ್ರಭು, ರಾಜ್ಯ ಸಮಿತಿ ಸದಸ್ಯೆ ಸವಿತಾ, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಕೋಶಾಧಿಕಾರಿ ವೀಣಾ ಅರುಣಾ ಶೆಟ್ಟಿ ಮೊದಲಾದವರಿದ್ದರು.

ಎರಡನೇ ದಿನವೂ ಜಲಫಿರಂಗಿ

ನಗರದಲ್ಲಿ ಸೋಮವಾರ ಜನರಲ್ ಆಸ್ಪತ್ರೆ ಶೋಚನೀಯಾವಸ್ಥೆ ಪರಿಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ವೇಳೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದರೆ, ಮಂಗಳವಾರ ಕಾಸರಗೋಡು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮತ್ತೆ ಜಲಫಿರಂಗಿ ಪ್ರಯೋಗಿಸಲಾಗಿದೆ. ಇದರಿಂದ ಹಲವು ಮಂದಿ ಕಾರ್ಯಕರ್ತರು ನೀರಿನಲ್ಲಿ ತೋಯ್ದುಕೊಂಡೇ ಪ್ರತಿಭಟನೆ ಮುಂದುವರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net