ಚನ್ನಪಟ್ಟಣ
ನಗರದ ಸಾತನೂರು ಸರ್ಕಲ್ನಲ್ಲಿ ಗುರುವಾರ ದ್ವಿಚಕ್ರ ವಾಹನ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಮತ್ತು ಅವರ ತಾಯಿ ಗಾಯಗೊಂಡಿದ್ದಾರೆ. ಪೌರಕಾರ್ಮಿಕ
ಸುಬ್ರಹ್ಮಣ್ಯ (30) ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ತಾಯಿ ಶಾಂತಮ್ಮಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚನ್ನಪಟ್ಟಣ ನಗರಸಭೆಯಲ್ಲಿ ಸುಬ್ರಹ್ಮಣ್ಯ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈತನ ಸಹಾಯಕ್ಕಾಗಿ ತಾಯಿಯೂ ಈತನ ಜತೆ ತೆರಳಿದ್ದರು. ಮಧ್ಯಾಹ್ನ ನಗರಸಭೆ ಆವರಣದಲ್ಲಿ ಹಾಜರಾತಿ ಹಾಕಬೇಕಾದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ತಾಯಿಯ ಜತೆ ನಗರಸಭೆ ಕಚೇರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.
ಸಾತನೂರು ರಸ್ತೆ ಕಡೆಯಿಂದ ನಗರಸಭೆ ಕಡೆಗೆ ಹೋಗಲು ಹೆದ್ದಾರಿ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗುದ್ದಿದೆ. ದ್ವಿಚಕ್ರ ವಾಹನ ಬಸ್‌ನ ಅಡಿಗೆ ಸಿಕ್ಕಿ ಜಖಂಗೊಂಡಿದೆ.
ಸುಬ್ರಹ್ಮಣ್ಯ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಸ್ಥಳೀಯರು ತಾಯಿ - ಮಗನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸುಬ್ರಹ್ಮಣ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಾಯಿ ಅಪಾಯದಿಂದ ಪಾರಾಗಿದ್ದಾರೆ.
ಎಚ್ಚರಿಸಿದ್ದ ವಿಜಯವಾಣಿ ವರದಿ
ಅಪಘಾತಕ್ಕೆ ಸಾತನೂರು ವೃತ್ತದಲ್ಲಿ ಹಲವಾರು ತಿಂಗಳುಗಳಿಂದ ಕೆಟ್ಟು ನಿಂತಿರುವ ಸಿಗ್ನಲ್ ದೀಪಗಳೇ ಕಾರಣ ಎನ್ನಬಹುದು. ಈ ಹಿಂದೆ ನಗರದ ಪ್ರಮುಖ ವೃತ್ತಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಸಿಗ್ನಲ್ ದೀಪಗಳನ್ನು ಆಳವಡಿಸಲಾಗಿತ್ತು. ಆದರೆ, ಅವುಗಳು ಕೆಟ್ಟು ತಿಂಗಳುಗಳೇ ಕಳೆದರೂ ಸರಿಪಡಿಸಿಲ್ಲ.
ಪ್ರಮುಖ ಸ್ಥಳ ಸಾತನೂರು ಸರ್ಕಲ್ನಲ್ಲಿ ಅತಿಹೆಚ್ಚು ವಾಹನ ಸಂಚಾರವಿದ್ದು, ಸಿಗ್ನಲ್ ದೀಪ ಅತೀ ಅಗತ್ಯವಾಗಿದೆ. ಈ ಜಾಗದಲ್ಲಿ ಸಿಗ್ನಲ್ ದೀಪ ಇಲ್ಲದೆ ಉಂಟಾಗಿರುವ ಸಮಸ್ಯೆಗೆ ಬಗ್ಗೆ ವಿಜಯವಾಣಿ ಪತ್ರಿಕೆ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಆದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸದಿರುವುದು ದುರಂತ ಎನ್ನಬಹುದು.