

ಬೆಳಗಾವಿ: ಕರ್ತವ್ಯದಲ್ಲಿದ್ದ ಜಿಲ್ಲಾಸ್ಪತ್ರೆಯ (ಬಿಮ್ಸ್) ಮಹಿಳಾ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ಸುಧಾರಾಣಿ ಹಡಪದ (30) ಹತ್ಯೆಯಾದ ಮಹಿಳೆ. ಬೈಲಹೊಂಗಲ ನಿವಾಸಿ ಈರಣ್ಣ ಜಗಜಂಪಿ ಕೊಲೆ ಆರೋಪಿ. ಕೊಲೆಗೈದ ಈರಣ್ಣನನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಉಳವಿ ಬಸವೇಶ್ವರ ಜಾತ್ರೆಯಲ್ಲಿ ಸುಧಾರಾಣಿಗೆ ಈರಣ್ಣ ಜಗಜಂಪಿ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಮದುವೆ ಆಗುವುದಾಗಿಯೂ ಸುಧಾರಾಣಿ ಈರಣ್ಣನನ್ನು ನಂಬಿಸಿ ಎರಡೂವರೆ ಲಕ್ಷ ರೂ. ಹಣ ಪಡೆದಿದ್ದಳು. ಅಲ್ಲದೆ ಇಬ್ಬರೂ ಸಲುಗೆಯಿಂದ ಜತೆ ಸೇರಿ ಸುತ್ತಾಡಿದ್ದರು. ಬಳಿಕ ಸುಧಾರಾಣಿ ಮದುವೆ ಆಗಲು ನಿರಾಕರಿಸಿದ್ದಳು. ಹಣ ಮರಳಿಸುವ ವಿಚಾರದಲ್ಲೂ ಈರಣ್ಣನನ್ನು ಸತಾಯಿಸಿದ್ದಳು ಎಂದು ತಿಳಿದುಬಂದಿದೆ. ಮದುವೆ ಆಗದಿದ್ದರೆ ಹಣ ಮರಳಿಸುವಂತೆ ಈರಣ್ಣ ಹಲವು ಬಾರಿ ತಿಳಿಸಿದ್ದನು. ಆದರೂ ಸುಧಾರಾಣಿ ತಲೆಕೆಡಿಸಿಕೊಂಡಿರಲಿಲ್ಲ. ಬುಧವಾರ ಬೆಳಗಿನ ಜಾವ ತಲ್ವಾರ್ ಸಮೇತ ಜಿಲ್ಲಾಸ್ಪತ್ರೆಗೆ ಬಂದ ಈರಣ್ಣ, ಕರ್ತವ್ಯದಲ್ಲಿದ್ದ ಸುಧಾರಾಣಿಯನ್ನು ಕೊಚ್ಚಿ ಕೊಲೆಗೈದಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಚಂದ್ರಶೇಖರ ನೀಲಗಾರ ಮಾಹಿತಿ ನೀಡಿದ್ದಾರೆ.