

ವಿಜಯಪುರ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಿಸುತ್ತಿರುವ ನಾಗರಿಕ ಸೌಲಭ್ಯ ವಸತಿ ನಿಲಯದಿಂದ ಹಲವು ಬಡಜನರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ 2024-25ನೇ ಸಾಲಿನ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ನಾಗರಿಕ ಸೌಲಭ್ಯ ವಸತಿ ನಿಲಯದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆ, ರಾಜ್ಯ ಮತ್ತು ದೇಶ ಅಭಿವೃದ್ಧಿ ಹೊಂದಲು ಸಮಾಜದ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯದಿಂದ ಇರುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಅತಿ ಹೆಚ್ಚಿನ ಅನುದಾನ ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರು ಸ್ವಾಸ್ಥ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊರೊನಾ ಮಹಾಮಾರಿ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಸರ್ಕಾರಿ ಆಸ್ಪತ್ರೆ ಸೇರಿದಂತೆ ಬಿಎಲ್‌ಡಿಇ ಆಸ್ಪತ್ರೆ, ಅಲ್‌ಅಮೀನ್ ಜಿಲ್ಲೆಯ ಜನರ ಹಿತಕ್ಕಾಗಿ ಕಾರ್ಯನಿರ್ವಹಿಸಿವೆ. ಬಿಎಲ್‌ಡಿಇ ಸಂಸ್ಥೆ ಕೊರೊನಾ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಪ್ರೊತ್ಸಾಹಿಸಿದೆ. ಆರೋಗ್ಯ ಮುಂಜಾಗ್ರತೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಇಲ್ಲಿ ನಿರ್ಮಿಸುತ್ತಿರುವ ನಾಗರಿಕ ಸೌಲಭ್ಯವುಳ್ಳ ವಸತಿ ನಿಲಯ ಅತ್ಯುಪಯುಕ್ತವಾಗಿದೆ ಎಂದರು.
ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಬಂಧಿಕರಿಗೆ ನಿರ್ಮಾಣವಾಗುತ್ತಿರುವ ನಾಗರಿಕ ವಸತಿ ನಿಲಯ ಅನುಕೂಲ ಒದಗಿಸಲಿದೆ. ಇದರಿಂದ ರೈತಾಪಿ ವರ್ಗ ಸೇರಿದಂತೆ ಬಡವರಿಗೆ ಅನುಕೂಲವಾಗಲಿದ್ದು, ಆರ್ಥಿಕ ಹೊರೆಯು ಕಡಿಮೆಯಾಗಲಿದೆ. ಕಟ್ಟಡದ ನಿರ್ಮಾಣದ ನಂತರ ಅದರ ನಿರ್ವಹಣೆ ಅತ್ಯಂತ ಮುಖ್ಯವಾಗಿದೆ. ಸುಧಾಮೂರ್ತಿ ಅವರು ವಿಜಯಪುರ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸಚಿವರು ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಎಲ್ಲರೂ ಶ್ರಮಿಸೊಣ ಎಂದರು.
ರಾಜ್ಯಸಭಾ ಸಂಸದೆ ಡಾ. ಸುಧಾಮೂರ್ತಿ ಮಾತನಾಡಿ, ಜಿಲ್ಲಾಸ್ಪತ್ರೆಗೆ ರೋಗಿಗಳೊಂದಿಗೆ ಬರುವವರಿಗಾಗಿ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸುತ್ತಿರುವ ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡದ ಸದುಪಯೋಗವಾಗಬೇಕು. ವಿವಿಧೆಡೆ ನಾಗರಿಕ ಸೌಲಭ್ಯವುಳ್ಳ ವಸತಿ ನಿಲಯ ನಿರ್ಮಿಸಲಾಗಿದೆ. ರೋಗಿಯೊಂದಿಗೆ ಬರುವ ಸಹಾಯಕರಿಗೆ ಅದು ಅನುಕೂಲವಾಗಲಿದೆ. ವಿಜಯಪುರಕ್ಕೂ ನನಗೂ ಭಾವನಾತ್ಮಕ ಸಂಬಂಧವಿದೆ. ಈ ಹಿನ್ನಲೆ ವಿಜಯಪುರ ಜಿಲ್ಲೆಯನ್ನು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಜತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಹೊರತಂದು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ, ತಾಳಿಕೋಟೆ ಮತ್ತು ಬಸವನಬಾಗೇವಾಡಿಯಲ್ಲಿ ಗ್ರಂಥಾಲಯ ನಿರ್ಮಿಸುತ್ತಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ಸಹಕರಿಸಬೇಕು ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲಾಸ್ಪತ್ರೆ ಮಾದರಿಯಾಗಿದೆ. ಇಲ್ಲಿನ ಡಯಾಲಿಸಿಸ್ ಕೇಂದ್ರ, ಆಕ್ಸಿಜನ್ ಪ್ಲಾಂಟ್‌ದಿಂದ ಹಲವು ರೋಗಿಗಳಿಗೆ ಅನುಕೂಲವಾಗಿದೆ. ಸುಧಾಮೂರ್ತಿಯವರ ಈ ಪ್ರಯತ್ನದಿಂದ ಅನೇಕ ಬಡಜನರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪಾಲಿಕೆ ಮೇಯರ್ ಮಹೇಜಬಿನ ಹೊರ್ತಿ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಪಾಲಿಕೆ ಸದಸ್ಯೆ ಆರತಿ ಶಹಾಪುರ, ಅಲ್-ಅಮೀನ್ ಮೆಡಿಕಲ್ ಕಾಲೇಜಿನ ಡಾ. ಬಿ.ಎಸ್. ಪಾಟೀಲ, ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಜಿಲ್ಲಾಸ್ಪತ್ರೆಯ ರವಿಕಿತ್ತೂರ ಮತ್ತಿತರರಿದ್ದರು.