

ಆರ್.ಆರ್.ನಗರ: ಇತ್ತೀಚೆಗೆ ಸುರಿದ ಮಳೆಗೆ ಲಕ್ಷ್ಮೀದೇವಿನಗರ ವಾರ್ಡ್ನ ಸಂಜಯ್ಗಾಂಧಿ ಬಡಾವಣೆ ಜಲಾವೃತಗೊಂಡಿದ್ದು ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹಲವು ವರ್ಷಗಳಿಂದ ಈ ಬಡಾವಣೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ತಪ್ಪಿದ್ದಲ್ಲ ಎಂಬಂತಾಗಿದೆ.
ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಂತಿರುವ ಬಡಾವಣೆಯು ತಗ್ಗು ಪ್ರದೇಶದಲ್ಲಿದೆ. ಮಳೆನೀರು ಒಳಚರಂಡಿ ನೀರಿನ ಪೈಪ್ ಮೂಲಕ ಹರಿದು ಹೋಗಿ ಮ್ಯಾನ್ಹೋಲ್ಗಳಿಂದ ಹೊರಬರುತ್ತಿದೆ. ಪರಿಣಾಮ ಒಳಚರಂಡಿ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿದೆ. ಕೆಲವೆಡೆ ಮನೆಗಳಿಗೆ ನುಗ್ಗುತ್ತಿದೆ ಇದರಿಂದ ಕಲುಷಿತ ನೀರಲ್ಲೇ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನಿವಾಸಿಗಳು ಅವಲತ್ತುಕೊಂಡಿದ್ದಾರೆ.
ಜೋರಾಗಿ ಮಳೆ ಬಂದರೆ ರಾಜ ಕಾಲುವೆಯಲ್ಲಿ ಹರಿಯುವ ನೀರು ಕೂಡ ಮನೆಗಳಿಗೆ ನುಗ್ಗುತ್ತದೆ. ಪರಿಣಾಮ ಕಾಲುವೆಗೆ ಸಮೀಪದಲ್ಲಿ ವಾಸವಾಗಿರುವ ಜನರು ಯಾವಾಗ ಮನೆಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗುತ್ತದೋ ಎಂಬ ಆತಂಕದಲ್ಲೇ ರಾತ್ರಿ ಕಳೆಯುವಂತಾಗಿದೆ. ಕಾರಣ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಸಮನ್ವತೆ ಸಾಧಿಸಿ ಕೂಡಲೇ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಸಂಜಯ್ ಗಾಂಧಿ ಬಡಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಬೇಕಿದೆ.
- ವೇಲು ನಾಯ್ಕರ್, ಪಾಲಿಕೆ ಮಾಜಿ ಸದಸ್ಯ