

ಕೆ.ಆರ್.ನಗರ: ಪಟ್ಟಣದ ಪಿ.ಎಲ್.ಡಿ.ಬ್ಯಾಂಕ್ ಸಮುದಾಯ ಭವನದಲ್ಲಿ ಜುಲೈ 7ರಂದು ನಡೆಯಲಿರುವ ಮೈಸೂರು ಮತ್ತು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪೌರ ಸನ್ಮಾನ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ಮೂರನೇ ರ‌್ಯಾಂಕ್ ಗಳಿಸಿರುವ ಡಾ. ಸಾ.ರಾ.ಧನುಷ್ ಅವರ ಅಭಿನಂದನಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ ಹೇಳಿದರು.
ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯದ ಭವನದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ನಾಗರಿಕ ವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೌರ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಂಶದ ಕುಡಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸಾ.ರಾ.ಧನುಷ್ ಅವರು ಅಪಾರ ಸಾಧನೆ ಮಾಡಿದ್ದು, ಇದರೊಂದಿಗೆ ರಾಜ್ಯಕ್ಕೆ ಸ್ನಾತಕೋತ್ತರ ಪದವಿಯಲ್ಲಿ ಮೂರನೇ ರ‌್ಯಾಂಕ್ ಪಡೆದಿದ್ದು ಹೆಮ್ಮೆಯ ವಿಚಾರ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಇವರೊಂದಿಗೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸಚಿವ ಸಾ.ರಾ.ಮಹೇಶ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ಜೆಡಿಎಸ್ ಅಧ್ಯಕ್ಷರಾದ ಎಚ್.ಸಿ.ಕುಮಾರ್, ಮೆಡಿಕಲ್ ರಾಜಣ್ಣ, ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾಲೂಕು ಅಧ್ಯಕ್ಷ ಹಂಪಾಪುರ ಸುರೇಶ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ತಾಪಂ ಮಾಜಿ ಸದಸ್ಯರಾದ ಶ್ರೀನಿವಾಸ ಪ್ರಸಾದ್, ಹಂಗರಬಾಯನಹಳ್ಳಿ ತಮ್ಮಣ್ಣ, ಪುರಸಭೆ ಸದಸ್ಯರಾದ ಉಮೇಶ್, ಸಂತೋಷಗೌಡ, ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಬಾಲಾಜಿ ಗಣೇಶ್, ಡಿ.ವಿ.ಗುಡಿ ಯೋಗೇಶ್, ಅನೀಫ್ ಗೌಡ, ಬೆಣಗನಹಳ್ಳಿ ಕೃಷ್ಣೇಗೌಡ ಸೇರದಂತೆ ಇನ್ನಿತರರು ಹಾಜರಿದ್ದರು.