

ಬೇಲೂರು: ಪೌರ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೌರ ನೌಕರರ ಸಂಘದ ಆದೇಶದಂತೆ ಮುಷ್ಕರ ಅಂತ್ಯಗೊಳಿಸಿದ್ದೇವೆ ಎಂದು ಪೌರ ನೌಕರರ ಸಂಘದ ಅಧ್ಯಕ್ಷ ಗೋಪಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಪೌರ ನೌಕರರು ನಡೆಸುತ್ತಿದ್ದ ಮುಷ್ಕರವನ್ನು ಶನಿವಾರ ಅಂತ್ಯಗೊಳಿಸಿ ಮಾತನಾಡಿದರು. ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ನಮ್ಮ 19 ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದೆವು. ಆದರೆ ಸರ್ಕಾರ ನಮ್ಮ ಮೂರು ಬೇಡಿಕೆಗಳನ್ನು ಈಗ ಈಡೇರಿಸಿ ನಂತರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ರಾಜ್ಯ ಸಂಘದ ಆದೇಶದಂತೆ ಮುಷ್ಕರವನ್ನು ಕೊನೆಗೊಳಿಸಿ, ಎಂದಿನಂತೆ ಕಚೇರಿ ಕೆಲಸ ಹಾಗೂ ಹಾಜರಾಗಿ ಪಟ್ಟಣದ ಸ್ವಚ್ಛತೆಗೆ ಮುಂದಾಗಿದ್ದೇವೆ. ನಮ್ಮ ಮುಷ್ಕರಕ್ಕೆ ಸಹಕರಿಸಿದ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಪೌರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಕುಮಾರ್, ಆರೋಗ್ಯಾಧಿಕಾರಿ ಲೋಹಿತ್, ಜಿಲ್ಲಾ ನಿರ್ದೇಶಕರಾದ ಜ್ಯೋತಿ, ಪ್ರತಿಕ್ಷ, ತಾಲೂಕು ನಿರ್ದೇಶಕರಾದ ನೀಲಾ, ಓಬಳೇಶ್, ಪ್ರಸನ್ನ, ಸಂತೋಷ್, ಸಂಜು, ಮಂಜುಳಾ, ಭಾಗ್ಯಮ್ಮ, ಪೃಥ್ವಿ, ಮೋಹನ್, ಸಲ್ಮಾನ್ ಖಾನ್, ನೀರು ಸರಬರಾಜು ಸಿಬ್ಬಂದಿ ಇತರರಿದ್ದರು.