

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಪೌರಸಂಸ್ಥೆಗಳಲ್ಲಿ ಆದಾಯ ಸಂಗ್ರಹಕ್ಕೆ ಹೊಸ ಮಾರ್ಗವನ್ನು ಕಂಡುಕೊಳ್ಳಲು ಸರ್ಕಾರ ಮುಂದಾಗಿದ್ದು, ಮುಂದಿನ ಅಧಿವೇಶನದಲ್ಲಿ ಪೌರಸಂಸ್ಥೆ ಕಾಯ್ದೆಗೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಪೌರಸಂಸ್ಥೆಗಳಿಗೆ ಆಸ್ತಿ ತೆರಿಗೆ, ನೀರಿನ ಕರ ಹೊರತುಪಡಿಸಿ ಸ್ವಂತ ಸಂಪನ್ಮೂಲವಿಲ್ಲ. ಆಸ್ತಿ ತೆರಿಗೆಯೂ ಸರಿಯಾಗಿ ವಸೂಲಿ ಆಗುತ್ತಿಲ್ಲ. ಹೀಗಾಗಿ ಸಂಸ್ಥೆಗಳು ಸರ್ಕಾರಗಳಿಂದ ಬರುವ ಅನುದಾನವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಕೆಲ ಸಂಸ್ಥೆಗಳಲ್ಲಿ ನೌಕರರಿಗೆ ಸಂಬಳ ಕೊಡುವುದಕ್ಕೂ ಪರದಾಡುವ ಸ್ಥಿತಿ ಇದೆ.
ಏನಿದು ಹೊಸ ಮಾರ್ಗ?: ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಕಷ್ಟು ಮೊಬೈಲ್ ಟವರ್ಗಳಿವೆ. ಖಾಸಗಿ ಜಾಹೀರಾತು ಹೋರ್ಡಿಂಗ್ಸ್ಗಳಿವೆ. ಇವುಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಆದಾಯ ಹೋಗಲಿ, ಹಿಡಿತವೂ ಇಲ್ಲ. ಹೀಗಾಗಿ ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳನ್ನು ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.
ಕಾಯ್ದೆ ತಿದ್ದುಪಡಿ
ಬಿಬಿಎಂಪಿ ಕಾಯ್ದೆಯಲ್ಲಿ ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಗೆ ವಾರ್ಷಿಕ ಶುಲ್ಕ ವಿಧಿಸುವ ಅವಕಾಶ ಮಾಡಿಕೊಳ್ಳಲಾಗಿದೆ. ಪಂಚಾಯ್ತಿಗಳ ವ್ಯಾಪ್ತಿಯಲ್ಲಿಯೂ ಟವರ್ಗಳಿಗೆ ಶುಲ್ಕ ವಿಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು, ಆದರೆ, ಜಾರಿಗೆ ಇನ್ನೂ ಬಂದಿಲ್ಲ. ಆದರೆ ಪೌರಸಂಸ್ಥೆಗಳ ವ್ಯಾಪ್ತಿಯ ಕಾಯ್ದೆಯಲ್ಲಿ ಈ ಅವಕಾಶ ಇಲ್ಲ. ಆದ್ದರಿಂದಲೇ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಪೌರಸಂಸ್ಥೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಪೌರಾಡಳಿತ ಇಲಾಖೆ ಮೂಲಗಳು ಖಚಿತಪಡಿಸಿವೆ.
ಎಷ್ಟಿರಲಿದೆ ತೆರಿಗೆ?
ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಗೆ ವಾರ್ಷಿಕ ತೆರಿಗೆ ವಿಧಿಸಲಾಗುತ್ತದೆ. ಕಂಪನಿಗಳೇ ಪಾವತಿ ಮಾಡಬೇಕಾಗುತ್ತದೆ. ಭೂಮಿಯ ಮಾರ್ಗಸೂಚಿ ಬೆಲೆ ಆಧಾರದಲ್ಲಿ ತೆರಿಗೆ ನಿಗದಿ ಮಾಡಲಾಗುತ್ತದೆ. ಹಾಗಾಗಿ ಏಕರೂಪತೆ ಇರುವುದಿಲ್ಲ. ಆ ರೀತಿಯಲ್ಲಿ ಕಾಯ್ದೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಲಭ್ಯ ಮಾಹಿತಿ ಪ್ರಕಾರ ಮೊಬೈಲ್ ಟವರ್ಗೆ ವಾರ್ಷಿಕ ಕನಿಷ್ಠ 25 ಸಾವಿರ ರೂ. ಗಳ ತೆರಿಗೆ ನಿಗದಿಯಾಗಬಹುದೆಂದು ಹೇಳಲಾಗುತ್ತಿದೆ. ತಿದ್ದುಪಡಿ ಕಾಯ್ದೆ ಸಚಿವ ಸಂಪುಟದ ಮುಂದೆ ಬಂದಾಗ ಮಾತ್ರ ತೆರಿಗೆಯ ಪ್ರಮಾಣದ ಸ್ಪಷ್ಟತೆ ಸಿಗಲಿದೆ. ಮಾರ್ಗಸೂಚಿ ಬೆಲೆ ಆಧಾರ ಎಂಬುದು ಮಾತ್ರ ಬಹುತೇಕ ಅಂತಿಮವಾಗಿದೆ. ಏಕರೂಪವಾಗಿ ಎಲ್ಲೆಡೆ ಒಂದೇ ದರ ನಿಗದಿ ಮಾಡುವುದು ವೈಜ್ಞಾನಿಕವಾಗುವುದಿಲ್ಲವೆಂದು ಹೇಳಲಾಗುತ್ತಿದೆ.
* ರಾಜ್ಯದಲ್ಲಿ ಐವತ್ತು ಸಾವಿರ ಟವರ್, ಜಾಹೀರಾತು ಫಲಕಗಳ ಲೆಕ್ಕ ಇಲ್ಲ
* ಗ್ರಾಮೀಣ ಭಾಗದ ಮೊಬೈಲ್ ಟವರ್ಗಳಿಗೆ 17,500 ರೂ. ಶುಲ್ಕ ಸಾಧ್ಯತೆ
ಪೌರಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢ ಮಾಡಲೇಬೇಕಾಗಿದೆ. ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಲೇಬೇಕಾಗಿದೆ. ಅದಕ್ಕಾಗಿ ಅಕ್ರಮ-ಸಕ್ರಮದ ಮಾದರಿಯಲ್ಲಿಯೇ ಬೇರೆ ಮೂಲಗಳನ್ನು ಹುಡುಕುತ್ತಿದ್ದೇವೆ. ಆ ನಿಟ್ಟಿನಲ್ಲಿ ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಗೆ ವೈಜ್ಞಾನಿಕವಾಗಿ ತೆರಿಗೆ ನಿಗದಿ ಮಾಡಲಿದ್ದೇವೆ.
| ರಹೀಂಖಾನ್ ಪೌರಾಡಳಿತ ಸಚಿವ