ಉದ್ಯಮಿಗೆ 5 ಕೋಟಿ ರೂ.ವಂಚನೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ

Chaithra Kundapura (3)
Published on


ಬೆಂಗಳೂರು: ಉಡುಪಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ೫ ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ತಪ್ಪೊಪ್ಪಿಗೆ ನೀಡಿದ್ದಾರೆ.

ಸಿಸಿಬಿ ಎದುರು ಚೈತ್ರಾ ನೀಡಿದ ಸ್ವ-ಇಚ್ಛಾ ಹೇಳಿಕೆ ನೀಡಿದ್ದು, ಇದರಲ್ಲಿ ವಿಷದ ಬಾಟಲಿ ನಾಟಕದ ಬಗ್ಗೆ, ಯಾರನ್ನೆಲ್ಲಾ ಬಳಸಿಕೊಂಡು, ಎಲ್ಲೆಲ್ಲಿ ಹಣ ವಸೂಲಿ ಮಾಡಲಾಯಿತು. ಡೀಲ್ ಮಾಡುವುದಕ್ಕೆ ಸಿಮ್ ಖರೀದಿ ಮಾಡಿಸಿಕೊಟ್ಟಿದ್ದು ಯಾರು ಎಂಬುದರ ಬಗ್ಗೆ ತಪ್ಪೊಪ್ಪಿಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಚೈತ್ರಾ ತಪ್ಪೊಪ್ಪಿಗೆ ಪ್ರತಿಯಲ್ಲಿ ಏನಿದೆ?:
2018ರಲ್ಲಿ ಅಭಿನವ ಹಾಲಶ್ರೀಯನ್ನು ಭೇಟಿ ಮಾಡಿದ್ದೆ. ನನಗೂ ಬಿಜೆಪಿಯ ಕೆಲ ನಾಯಕರು ಗೊತ್ತಿದ್ದರಿಂದ ಅಭಿನವ ಹಾಲಶ್ರೀ ನನಗೆ ಒಂದು ಮಾತು ಹೇಳಿದರು. ಈಗಾಗಲೇ 10 ಜನರ ಪೈಕಿ ೬ ಜನರಿಗೆ ಟಿಕೆಟ್ ಕೊಡಿಸಿದ್ದೇನೆ. ಇನ್ನು ೪ ಜನರಿಗೆ ಟಿಕೆಟ್ ಕೊಡಿಸುತ್ತೇನೆ ಅಂತ ಹೇಳಿದ್ರು. ಬಿಜೆಪಿಯ ಟಿಕೆಟ್ ಯಾರಿಗಾದರೂ ಬೇಕಾದರೆ ನನಗೆ ಹೇಳಿ ನಾನು ಟಿಕೆಟ್ ಕೊಡಿಸ್ತೀನಿ ಅಂದಿದ್ದರು. 2022 ರಲ್ಲಿ ಪ್ರಸಾದ್ ಬೈಂದೂರು ಮೂಲಕ ನನಗೆ ಗೋವಿಂದ ಬಾಬು ಪೂಜಾರಿ ಅವರ ಸಂಪರ್ಕವಾಯ್ತು. ಗೋವಿಂದಬಾಬು ಪೂಜಾರಿ ಬೈಂದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗೋವಿಂದ ಬಾಬು ಪೂಜಾರಿ ಅವರಿಗೆ ಮೋಸ ಮಾಡುವುದಕ್ಕಾಗಿ ಗಗನ್ ಜತೆ ಸೇರಿಕೊಂಡೆ. ಕೇಂದ್ರದ ನಾಯಕರು ಎಂದು ರಮೇಶ್, ಧನರಾಜ್ ಅವರನ್ನು ಪರಿಚಯ ಮಾಡಿಕೊಡಲು ತೀರ್ಮಾನ ಮಾಡಲಾಗಿತ್ತು. ಅದರಂತೆ ಧನರಾಜ್ ಮತ್ತು ರಮೇಶ್‌ಗೆ ಮೂರು ಗಂಟೆಗಳ ಕಾಲ ರಿಹರ್ಸಲ್ ಮಾಡಿಸಲಾಗಿತ್ತು. 2022ರ ಜುಲೈ 4ರಂದು ಗಗನ್, ಗೋವಿಂದ ಬಾಬು ಪೂಜಾರಿಯನ್ನು ಚಿಕ್ಕಮಗಳೂರಿನ ಅತಿಥಿ ಗೃಹಕ್ಕೆ ಕರೆಸಿಕೊಂಡು ಧನರಾಜ್ ಮತ್ತು ರಮೇಶ್ ಇಬ್ಬರನ್ನು ಪ್ರಧಾನಮಂತ್ರಿ ಮತ್ತು ಗೃಹಸಚಿವಾಲಯದ ನಿಕಟವರ್ತಿಗಳು ಅಂತ ಪರಿಚಯ ಮಾಡಿಕೊಡಲಾಯಿತು. ಗಗನ್ ಆ ಸಂದರ್ಭದಲ್ಲಿ 50 ಲಕ್ಷಕ್ಕೆ ಬೇಡಿಕೆ ಇಟ್ಟರು. ಆಗ ಗೋವಿಂದಬಾಬು ಪೂಜಾರಿ ಏಕಾಏಕಿ ಹಣ ನೀಡಲು ಒಪ್ಪಿಕೊಂಡರು. ಇದರಿಂದ ಖುಷಿಯಾಗಿ ನಾವು ಮುಂದಿನ ಡೀಲ್ಗೆ ಇಳಿದ್ವಿ. ಹೈಕಮಾಂಡ್ ನಾಯಕರು ಅಂತ ಹೇಳಿದ್ದ ಧನರಾಜ್ ಮತ್ತು ರಮೇಶ್‌ಗೆ 2 ಲಕ್ಷ ರೂ. ಹಣ ಕೊಡಲಾಯಿತು. ಶಿವಮೊಗ್ಗದ ಆರ್‌ಎಸ್‌ಎಸ್ ಕಚೇರಿಯ ಬಳಿ ಮತ್ತೆ ಕರೆಸಿ ೩ ಕೋಟಿ ಕೇಳಿದ್ವಿ. 3 ಕೋಟಿಯನ್ನು ಪ್ರಸಾದ್ ಬೈಂದೂರು ಮೂಲಕ ಮಂಗಳೂರಿಗೆ ಹಣ ತರಿಸಿಕೊಳ್ಳಲಾಯಿತು. ಗೋವಿಂದ ಬಾಬು ನೀಡಿದ್ದ ೫೦ ಲಕ್ಷದಲ್ಲಿ ೧೨ ಲಕ್ಷ ಗಗನ್ ಕಡೂರಿಗೆ ನೀಡಲಾಗಿತ್ತು. ಚೆನ್ನನಾಯ್ಕನನ್ನು ಬಳಸಿಕೊಂಡು ವಿಶ್ವನಾಥ್ ಜೀ ಹೆಸರನ್ನು ಹೇಳಿ ಮೋಸ ಮಾಡಲಾಗಿತ್ತು ಎಂದು ಸಿಸಿಬಿ ಮುಂದೆ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ.

ಪೊಲೀಸರಿಗೆ ಚೈತ್ರಾ ಕೊಟ್ಟ 5 ಕೋಟಿ ಲೆಕ್ಕ ಹೀಗಿದೆ:

  • ಶ್ರೀಕಾಂತ್‌ಗೆ 3.2 ಕೋಟಿ ರೂ.
  • ಅಭಿನವ ಹಾಲಶ್ರೀಗೆ 1.5 ಕೋಟಿ ರೂ.
  • ಗಗನ್ ಕಡೂರ್‌ಗೆ 39 ಲಕ್ಷ ರೂ.
  • ರಮೇಶ್‌ಗೆ 2 ಲಕ್ಷ ರೂ.
  • ಧನರಾಜ್ಗೆ 2 ಲಕ್ಷ ರೂ.
  • ಚೆನ್ನನಾಯ್ಕ್ ಗೆ 2 ಲಕ್ಷ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net