ನಗರದ ರಸ್ತೆಗಳು ಹೊಂಡಮಯ

Ksd_Potholed
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನಗರ ಮಧ್ಯೆ ರಸ್ತೆ ಹೊಂಡಬಿದ್ದು ವಾಹನ, ಪಾದಚಾರಿಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ನಗರದ ಎಂ.ಜಿ.ರಸ್ತೆ, ನಾಯಕ್ಸ್ ರಸ್ತೆ, ಕೋಟೆ ರಸ್ತೆ, ಬ್ಯಾಂಕ್ ರಸ್ತೆ ಸಂಪೂರ್ಣ ಹಾಳಾಗಿದ್ದು, ತಾತ್ಕಾಲಿಕ ದುರಸ್ತಿಗೂ ನಗರಸಭೆ ಮುಂದಾಗದಿರುವುದು ವಾಹನ ಚಾಲಕರು, ಪಾದಚಾರಿಗಳನ್ನು ಅಸಮಧಾನಕ್ಕೀಡುಮಾಡಿದೆ.

ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಹೊಂಡಗಳಿಂದ ಆಟೋರಿಕ್ಷಾ, ದ್ವಿಚಕ್ರ ವಾಹನ ಸವಾರರ ಪಾಲಿಗೆ ಕಂಟಕ ಎದುರಾಗುತ್ತಿದೆ. ನಗರದಲ್ಲಿ ಹೊಂಡ ತಪ್ಪಿಸುವ ಭರದಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಪಾದಚಾರಿಗಳ ಫೂಟ್‌ಪಾತ್ ನಡೆದಾಡಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಫೂಟ್‌ಪಾತ್‌ಗೆ ಅಳವಡಿಸಿದ್ದ ಸ್ಲ್ಯಾಬ್ ಗಳು ಕುಸಿದು ಪಾದಚಾರಿಗಳ ಪಾಲಿಗೆ ಮರಣಗುಂಡಿಗಳಾಗಿ ಪರಿಣಮಿಸಿವೆ. ಇತ್ತೀಚೆಗೆ ಫೂಟ್‌ಪಾತ್‌ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಹೊಂಡಕ್ಕೆ ಕಾಲು ಸಿಲುಕಿ ಪಾದಚಾರಿಗಳು ಗಾಯಗೊಂಡ ಘಟನೆ ನಡೆದಿತ್ತು.

ಕಾಸರಗೋಡು ಪ್ರೆಸ್‌ಕ್ಲಬ್ ಜಂಕ್ಷನ್‌ನಿಂದ ಚಂದ್ರಗಿರಿ ಸೇತುವೆವರೆಗಿನ ಕೆಎಸ್‌ಟಿಪಿ ರಸ್ತೆ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತ್ತರವೆನಿಸಿದೆ. ಒಂದೆಡೆ ನಗರದೊಳಗಿನ ರಸ್ತೆ ಹದಗೆಟ್ಟಿದ್ದರೆ, ಇನ್ನೊಂದೆಡೆ ಪೊಲೀಸರು ಅಲ್ಲಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಡುತ್ತಿವೆ. ಬಿರುಸಿನ ಮಳೆಗೆ ರಸ್ತೆಗಳೆಲ್ಲಾ ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪಿದ್ದು, ತಾತ್ಕಾಲಿಕ ದುರಸ್ತಿ ನಡೆಸುವಂತೆ ಚಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಿರುಸಿನ ಮಳೆಯಿಂದ ರಸ್ತೆಗಳ ತಾತ್ಕಾಲಿಕ ದುರಸ್ತಿಕಾರ್ಯ ವಿಳಂಬವಾಗಿದೆ. ಈಗಾಗಲೇ ಪ್ರೆಸ್‌ಕ್ಲಬ್ ಜಂಕ್ಷನ್‌ನಿಂದ ಚಂದ್ರಗಿರಿ ಸೇತುವೆವರೆಗಿನ ರಸ್ತೆ ದುರಸ್ತಿಕಾರ್ಯ ಶೀಘ್ರ ಪೂರ್ತಿಗೊಳ್ಳಲಿದೆ. ಜತೆಗೆ ನಗರದೊಳಗಿನ ರಸ್ತೆ ದುರಸ್ತಿ ನಡೆಯಲಿದೆ. ಅಬ್ಬಾಸ್ ಬೀಗಂ, ಅಧ್ಯಕ್ಷರು ನಗರಸಭೆ, ಕಾಸರಗೋಡು

ಅಬ್ಬಾಸ್ ಬೀಗಂ, ಅಧ್ಯಕ್ಷರು ನಗರಸಭೆ, ಕಾಸರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net