

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮಕ್ಕೆ ನಗರ ಅಣಿಯಾಗುತ್ತಿದ್ದು, ಹಬ್ಬದ ದಿನ ಬೆಲೆ ಮತ್ತಷ್ಟು ಹೆಚ್ಚಲಿದೆ ಎಂಬ ಕಾರಣಕ್ಕೆ ಮೂರು ದಿನ ಮುಂಚಿತವಾಗಿಯೇ ಜನರು ಖರೀದಿಯಲ್ಲಿ ತೊಡಗಿಕೊಂಡಿದ್ದು, ಶುಕ್ರವಾರ ಮಾರುಕಟ್ಟೆಯಲ್ಲಿ ವ್ಯಾಪಾರ ಬಿರುಸಾಗಿತ್ತು.
ಈಗಾಗಲೇ ಹೂವು, ಹಣ್ಣು, ಬೂದುಗುಂಬಳಕಾಯಿ, ನಿಂಬೆ ಸೇರಿ ಆಯುಧ ಪೂಜೆಗೆ ಅಗತ್ಯ ಸಾಮಗ್ರಿಗಳು ನಗರದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ಅನೇಕ ಮಾರುಕಟ್ಟೆಗೆ ಆಗಮಿಸಿವೆ.
ಭಾನುವಾರದಿಂದ ಮಂಗಳವಾರದವರೆಗೆ ಮೂರು ದಿನ ನಿರಂತರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಬಹುತೇಕ ಕಚೇರಿ, ಕಾಲೇಜುಗಳು, ವ್ಯಾಪಾರಿ ಮಳಿಗೆ, ಗೋದಾಮು, ್ಯಾಕ್ಟರಿ, ವಾಹನಗಳಿಗೆ ಶುಕ್ರವಾರವೇ ಆಯುಧ ಪೂಜೆ ನೆರವೇರಿಸಲಾಯಿತು. ಇನ್ನೂ ಕೆಲವರು ಶನಿವಾರ ಪೂಜೆ ಮಾಡಲಿದ್ದಾರೆ. ಹಾಗಾಗಿ ಶುಕ್ರವಾರದಿಂದಲೇ ಮಾರುಕ್ಟೆಗಳಲ್ಲಿ ವ್ಯಾಪಾರ ಚುರುಕುಗೊಂಡಿದೆ.
ದುಬಾರಿಯಾದ ಬೂದುಗುಂಬಳ: ಹಬ್ಬದಲ್ಲಿ ವಿಶೇಷವಾಗಿ ಅಂಗಡಿ, ಮನೆ, ವಾಹನಗಳು, ಕಚೇರಿಗಳೂ, ಕಾರ್ಖಾನೆಗಳಲ್ಲಿನ ಯಂತ್ರೋಪಕರಣಗಳು ಸೇರಿ ಎಲ್ಲ ವಸ್ತುಗಳಿಗೂ ಪೂಜೆ ಸಲ್ಲಿಸುವುದು ಆಯುಧ ಪೂಜೆಯ ವಿಶೇಷತೆಯಾಗಿದೆ. ಈ ಎಲ್ಲಾ ಪೂಜೆಗಳಿಗೂ ಶ್ರೇಷ್ಠವಾಗಿರುವ ಬೂದು ಗುಂಬಳದ ದರ ಈ ಬಾರಿ ಗಗನಕ್ಕೇರಿದೆ. ಕೆ.ಜಿ. 30 ರಿಂದ 40 ರೂ. ಇದೆ. ಕೆಲವೆಡೆ ಕಾಯಿಯ ಗಾತ್ರ ಆಧರಿಸಿ 150-200 ರೂ.ಗೆ ಮಾರಾಟ ಮಾಡಲಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶದಿಂದ ಬೂದಗುಂಬಳಕಾಯಿ ಮಾರುಕಟ್ಟೆಗೆ ಬಂದಿದೆಯಾದರೂ ಮಳೆಯಿಲ್ಲದೆ ಈ ಬಾರಿ ಇಳುವರಿ ಹೆಚ್ಚಿಲ್ಲ. ಹೀಗಾಗಿ, ಬೂದುಗುಂಬಳ ಸೇರಿ ಹಣ್ಣು, ತರಕಾರಿ ಬೆಲೆ ಹೆಚ್ಚಾಗಿದೆ.
ಹೂವಿನ ದರ ದಿಢೀರ್ ಏರಿಕೆ: ಕಳೆದ ವಾರಕ್ಕೆ ಹೋಲಿಸಿದರೆ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಹೂವಿನ ದರ ದಿಢೀರ್ ಏರಿಕೆಯಾಗಿದೆ. ಹಬ್ಬಕ್ಕೆ ಬೆಲೆ ಹೆಚ್ಚಳ ಎಂಬ ಕಾರಣಕ್ಕೆ ಹಾಗೂ ಶುಕ್ರವಾರದಿಂದಲೇ ಕೆಲವರು ಪೂಜೆ ಆರಂಭಿಸಿರುವುದರಿಂದ ಹೂವಿಗೆ ಬೇಡಿಕೆ ಹೆಚ್ಚಿದ್ದು, ಅದರಂತೆ ದರವೂ ಏರಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಸೇವಂತಿ ಹೂವು ಕೆ.ಜಿ.ಗೆ 200 ರಿಂದ 250 ರೂ. ಇತ್ತು. ಚೆಂಡು ಹೂವು ಕೆ.ಜಿ.ಗೆ 60-80 ರೂ. ತಲುಪಿದೆ. ಈ ಹೂಗಳು ಹೆಚ್ಚಾಗಿ ಗೌರಿಬಿದನೂರು, ಮೈಸೂರು ಮತ್ತಿತರ ಭಾಗಗಳಿಂದ ಬರುತ್ತಿವೆ. ಮಲ್ಲಿಗೆ ಮೊಗ್ಗು ಕೆ.ಜಿ.ಗೆ 600 ರೂ. ಇದ್ದು, ಬಹುತೇಕ ಹೂವು ತಮಿಳುನಾಡಿನಿಂದ ಬರುತ್ತಿದೆ. ಕನಕಾಂಬರ ಬೆಲೆ ಕೂಡ ಕಳೆದ ಎರಡು ದಿನಗಳಿಂದೀಚೆಗೆ ಏರಿಕೆಯಾಗಿದ್ದು, ಕೆ.ಜಿ.ಗೆ 1000 ರೂ. ತಲುಪಿದೆ. ಸುಗಂಧರಾಜ ಹೂವಿನ ಹಾರ 300 ರೂ. ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ.
ಕಡ್ಲೆಪುರಿ ಮೂಟೆಗಳ ದಾಸ್ತಾನು: ಆಯುಧಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿ ಮತ್ತಿತರರಿಗೆ ಹಣ್ಣು ಮತ್ತು ಸಿಹಿಯೊಂದಿಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ, ಕಡ್ಲೆಪುರಿಗೆ ಬೇಡಿಕೆ ಹೆಚ್ಚಿದ್ದು, ಒಂದು ಸೇರಿಗೆ 10 ರೂ.ವರೆಗೆ ಮಾರಾಟವಾಗುತ್ತಿದೆ. ಅಂಗಡಿಗಳಲ್ಲಿ ಮೂಟೆಗಟ್ಟಲೆ ಕಡಲೆಪುರಿ ದಾಸ್ತಾನು ಮಾಡಲಾಗಿದೆ.
ಬೇಕರಿ ತಿಂಡಿಗೆ ಹೆಚ್ಚಿದ ಬೇಡಿಕೆ: ಆಯುಧ ಪೂಜೆಯಲ್ಲಿ ಸಿಹಿ ವಿತರಿಸುವುದು ವಾಡಿಕೆ ಅದರಂತೆ ಕಾರ್ಖಾನೆಗಳಲ್ಲಿ ಪೂಜೆ ಮಾಡಿದ ನಂತರ ನೌಕರರಿಗೆ ಸ್ವೀಟ್ ಬಾಕ್ಸ್ ವಿತರಿಸಲಾಗುತ್ತದೆ. ಮನೆಗಳಲ್ಲೂ ವಾಹನ ಹಾಗೂ ವಸ್ತುಗಳ ಪೂಜೆ ಮಾಡಿ ನೆರೆಯವರನ್ನು ಕರೆದು ಅರಿಶಿನ ಕುಂಕುಮದ ಜೊತೆಗೆ ಸಿಹಿ ನೀಡಲಾಗುತ್ತದೆ. ಹೀಗಾಗಿ ನಗರದ ಬೇಕರಿ ಅಂಗಡಿಗಳ ಮುಂದೆಯೇ ಜನರ ಸಾಲು ಸಾಮಾನ್ಯವಾಗಿದೆ. ಕೆಲೆವೆಡೆ ಕಲ್ಯಾಣ ಮಂಟಪಗಳಲ್ಲಿ ಆರ್ಡ್‌ರ್ ಪಡೆದು ಸಿಹಿ ತಯಾರಿಸಿ ನೀಡಲಾಗುತ್ತಿದೆ.
ಕೆ.ಆರ್. ಮಾರುಕಟ್ಟೆ ಸಗಟು ದರ (ಕೆ.ಜಿ.ಗಳಲ್ಲಿ)
ಸೇವಂತಿಗೆ 200-250 ರೂ.
ಮಲ್ಲಿಗೆ 600-800ರೂ.
ಕನಕಾಂಬರ 1000-1,200 ರೂ.
ಗುಲಾಬಿ 200 -250 ರೂ.
ಸುಂಗಂಧ 250 ರೂ.
ಕಾಕಡ 500 ರೂ.
ಚೆಂಡು ಹೂವು 60-80 ರೂ.