

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದರ ಆಡಳಿತವನ್ನು ಪುನ@ ರಚಿಸಿ ರಾಜ್ಯ ಸರ್ಕಾರ ಸೆ.2 ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಡಳಿತ ಜಾರಿಗೊಳಿಸಿದ್ದು, ಇದರ ಅಡಿಯಲ್ಲಿ ಐದು ಹೊಸ ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಈ ಐದು ಪಾಲಿಕೆಗಳಿಗೂ ಪ್ರತ್ಯೇಕ ಕಚೇರಿಗಳನ್ನು ನಿರ್ಮಿಸಲು ಆಯಾ ವಲಯಗಳಲ್ಲಿ ಚಿಂತನೆ ನಡೆಯುತ್ತಿದೆ.
ಬಿಬಿಎಂಪಿಯ ಮುಖ್ಯ ಕಚೇರಿ ಜಿಬಿಎ ಪ್ರಧಾನ ಕಚೇರಿಯಾಗಿ ಬದಲಾಗಿದ್ದು, ಉಳಿದಂತೆ ಐದು ಭಾಗಗಳಾಗಿ ಗುರುತಿಸಲಾಗಿರುವ ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ನಗರಗಳಲ್ಲಿ ಆಡಳಿತ ಕಚೇರಿ ವ್ಯವಸ್ಥೆಗಳು ನಡೆಯುತ್ತಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮುಖ್ಯ ಕಚೇರಿಯನ್ನು ವಿಜಯನಗರ&ಅತ್ತಿಗುಪ್ಪೆ ಭಾಗದಲ್ಲಿ ಸ್ಥಳ ಗುರುತಿಸಿ, ನೂತನ ಕಟ್ಟಡ ನಿರ್ಮಾಣ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಸದ್ಯಕ್ಕೆ ಒಂದೆರಡು ವಾರದಲ್ಲಿ ಪಾಲಿಕೆಯ ಆಡಳಿತ ಕಚೇರಿಯು ರಾಜರಾಜೇಶ್ವರಿ ನಗರದಲ್ಲಿರುವ ಜೋನಲ್ ಕಚೇರಿಗೆ ಸ್ಥಳಾಂತರಗೊಳ್ಳಲಿದೆ. ಈಗಾಗಲೇ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಾಂತರಗೊಂಡಿದ್ದು, ಇನ್ನೂ ಹೆಚ್ಚಿನ ಸಿಬ್ಬಂದಿ ಹಾಗೂ ಇಂಜಿನಿಯರ್ಗಳು ಬರಲಿದ್ದಾರೆ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎರಡು ಕಚೇರಿಯಿಂದ ನಿರ್ವಹಣೆ: ಸದ್ಯಕ್ಕೆ ಪಾಲಿಕೆಗಳ ಕೆಲಸ&ಕಾರ್ಯಗಳನ್ನು ಮಲ್ಲೇಶ್ವರದ ಜಿಬಿಎ ಕಚೇರಿ ಹಾಗೂ ಆಯಾ ವಲಯದ ಪಾಲಿಕೆಯ ತಾತ್ಕಾಲಿಕ ಕಚೇರಿಗಳಿಂದ ನಿರ್ವಹಣೆ ನಡೆಯಲಿದ್ದು, ಆಯುಕ್ತರ ಸಭೆಗಳು ಈ ಎರಡು ಕಚೇರಿಗಳಲ್ಲೂ ನಡೆಯಲಿದೆ. ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವೂ ಈ ಎರಡು ಕಡೆಯೂ ಕಾರ್ಯನಿರ್ವಹಿಸಲಿದ್ದಾರೆ.
ಐಎಎಸ್, ಐಪಿಎಸ್ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸ್ವರೂಪಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗಿದೆ.
ಕಾಮಗಾರಿಗಳು ಶುರುವಾಗಬೇಕು: ಈಗಾಗಲೇ ಬಿಬಿಎಂಪಿ ನಡೆಸುತ್ತಿದ್ದ ಯೋಜನೆಗಳು, ರಸ್ತೆ ಇತ್ಯಾದಿ ಕಾಮಗಾರಿಗಳಿಗೆ ಯಾವುದೇ ತೊಂದರೆ ಆಗಲ್ಲ. ಕಾಮಗಾರಿ ನಡೆಯುತ್ತಿರುವ ಪ್ರದೇಶ ಯಾವ ಪಾಲಿಕೆಯ ಅಡಿಯಲ್ಲಿ ಬರುತ್ತದೋ ಆಯಾ ಪಾಲಿಕೆಗಳು ಅವುಗಳನ್ನು ಈಗಾಗಲೇ ಟೇಕ್ ಓವರ್ ಮಾಡಿದೆ. 2&3 ವಾರದಲ್ಲಿ ಪಾಲಿಕೆಗಳ ಕಚೇರಿ ವ್ಯವಸ್ಥೆಗಳು ವ್ಯವಸ್ಥಿತವಾಗಿ ಆದ ಬಳಿಕೆ ಕಾಮಗಾರಿಗಳು ಪ್ರಾರಮಭವಾಗಲಿದೆ. ಆನ್ಲೈನ್ ವ್ಯವಸ್ಥೆ ಇರುವುದರಿಂದಲೇ ೈಲ್ ಮೂವ್ಮೆಂಟ್ಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಉಳಿದಂತೆ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ ಎಂದು ತಿಳಿಸಿದರು.
ಜಿಬಿಎಗೆ ಹೊಸ ಬ್ಯಾಂಕ್ ಖಾತೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವದಲ್ಲಿ ಇಲ್ಲದ ಕಾರಣ 13 ಬ್ಯಾಂಕ್ ಖಾತೆಗಳನ್ನು ಮುಚ್ಚಿ, ಮುಕ್ತಾಯದ ಬಾಕಿಯನ್ನು ಮುಖ್ಯ ಖಾತೆಗೆ ವರ್ಗಾಯಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ವ್ಯವಸ್ಥೆ ಜಾರಿಗೆ ಬರುವವರೆಗೂ ಉಳಿದಿರುವ 73 ಬ್ಯಾಂಕ್ ಖಾತೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ವಿವಿಧ ಇಲಾಖೆಗಳು ಸುಮಾರು 205 ಇತರ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿವೆ ಹಾಗೂ ಹೊಸ ಖಾತೆಗಳನ್ನು ತೆರೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.