

ಬೆಂಗಳೂರು: ಸಿಗರೇಟ್ ಸಗಟು ವ್ಯಾಪಾರಿಗಳಿಂದ ಲಕ್ಷಾಂತರ ರೂ. ಸುಲಿಗೆ ಪ್ರಕರಣದ ಸಂಬಂಧ ಪಶ್ಚಿಮ ವಿಭಾಗದ ಅಧಿಕಾರಿಗಳು, ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಪರಿಶೀಲನೆ ನಡೆಸಿ ಸಿಸಿ ಕ್ಯಾಮರಾದ ಡಿವಿಆರ್ ಮತ್ತು ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಡಿಸಿಪಿ ವಿಚಾರಣೆ ಸಾಧ್ಯತೆ ಸುಲಿಗೆ ಪ್ರಕರಣದ ಸಂಬಂಧ ಸಿಸಿಬಿ ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್ ಮತ್ತು ರವಿಕುಮಾರ್ರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆಯಲು ಪಶ್ಚಿಮ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ನೋಟಿಸ್ ಸಹ ಜಾರಿಯಾಗಲಿದೆ ಎಂದು ತಿಳಿದು ಬಂದಿದೆ. ನಕಲಿ ಮಾಸ್ಕ್ ದಂಧೆ ಮತ್ತು ಅಕ್ರಮ ಸಿಗರೇಟ್ ಮಾರಾಟದ ಪ್ರಕರಣಗಳ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ಸಿಸಿಬಿಯ ಡಿಸಿಪಿಗಳು, ಆಯುಕ್ತರಿಗೆ ವರದಿ ನೀಡಿದ್ದರು. ಈ ವರದಿ ಅನುಸಾರ ಆರೋಪಿಗಳಾದ ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳನ್ನು ಅಮಾನತುಗೊಳಿಸಲಾಗಿತ್ತು.
ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದ ತಂಡ ಕಮಿಷನರ್ ಕಚೇರಿ, ಸಿಸಿಬಿ ಕಚೇರಿ ಮತ್ತು ಆರ್ಬಿಎಲ್ ಬ್ಯಾಂಕ್ ಸೇರಿದಂತೆ ಹಲವೆಡೆ ಶೋಧ ನಡೆಸಿತು. ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಎಂ. ಪ್ರಭುಶಂಕರ್ ಮತ್ತು ಇನ್ಸ್ಪೆಕ್ಟರ್ಗಳಾದ ಆರ್.ಎಂ. ಅಜಯ್ ಹಾಗೂ ನಿರಂಜನ್ ಕುಮಾರ್ ಸಿಗರೇಟ್ ವ್ಯಾಪಾರಿಗಳಿಂದ ಹಣ ಪಡೆದಿದ್ದರು ಎನ್ನಲಾದ ಸ್ಥಳಗಳಲ್ಲಿ ತನಿಖಾಧಿಕಾರಿಗಳು ಮಹಜರ್ ನಡೆಸಿದ್ದಾರೆ.
ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ
ಹಣ ವರ್ಗಾವಣೆ ನಡೆದಿದ್ದ ಪೊಲೀಸ್ ಆಯುಕ್ತರ ಕಚೇರಿ, ಚಾಮರಾಜಪೇಟೆಯ ಸಿಸಿಬಿ ಕಚೇರಿಯ ಎಸಿಪಿ ಕೊಠಡಿ ಹಾಗೂ ಆರ್ಬಿಎಲ್ ಬ್ಯಾಂಕ್ ಕಚೇರಿಗಳ ಸಿಸಿ ಕ್ಯಾಮರಾ ಮತ್ತು ಡಿವಿಆರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೇ 4ರಂದು ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ಎಸಿಪಿ ಪ್ರಭುಶಂಕರ್ರ ವಿಚಾರಣೆ ನಡೆಸಿದ್ದರು. ಆಗ ಎಸಿಪಿ 25 ಲಕ್ಷ ರೂ.ಗಳನ್ನು ಆಯುಕ್ತರ ಕಚೇರಿಯಲ್ಲಿರುವ ಡಿಸಿಪಿ ಕೊಠಡಿಗೆ ತಂದು ಒಪ್ಪಿಸಿದ್ದರು.
ಮೇ 6ರಂದು ಇನ್ಸ್ಪೆಕ್ಟರ್ ಅಜಯ್ ಮತ್ತು ನಿರಂಜನ್ ಅವರಿಂದ ಹಣವನ್ನು ಜಪ್ತಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ರಮೇಶ್ ಬಾನೋತ್ ನೇತೃತ್ವದ ತಂಡ ಆಯುಕ್ತರ ಕಚೇರಿಯ ಸಿಸಿ ಕ್ಯಾಮರಾದ ಡಿವಿಆರ್ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳ ಚಲನವಲನಗಳು ಪತ್ತೆಯಾಗಿವೆ. ಇದನ್ನು ಸಾಕ್ಷ್ಯಾಗಿ ಪರಿಗಣಿಸಲಾಗಿದೆ. ಅದೇ ರೀತಿ ಬಾಣಸವಾಡಿಯ ನಕಲಿ ಮಾಸ್ಕ್ ದಂಧೆ ಪ್ರಕರಣದಲ್ಲಿ ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ಅಜಯ್ ಆರ್ಬಿಎಲ್ ಬ್ಯಾಂಕ್ ಶಾಖೆಯಲ್ಲಿ ಡ್ರಾ ಮಾಡಿದ್ದರು. ಈ ಬ್ಯಾಂಕ್ ಶಾಖೆ ಮೇಲೂ ದಾಳಿ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು, ಬ್ಯಾಂಕ್ ಸಿಸಿ ಕ್ಯಾಮರಾ ಜಪ್ತಿ ಮಾಡಿ ದ್ದಾರೆ. ಹಣ ವರ್ಗಾವಣೆ ಸಂಬಂಧ ಬ್ಯಾಂಕ್ ಅಧಿಕಾರಿ ಗಳ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲು: ಪೊಲೀಸರಿಗೆ ಹಣ ಕೊಟ್ಟ ನಗರದ ಪ್ರಮುಖ 8 ಮಂದಿ ಸಿಗರೇಟ್ ವಿತರಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಪ್ರಮುಖ ದಾಖಲೆಯಾಗಿವೆ. ಸಿಸಿಬಿ ಕಚೇರಿಯ ಸಿಬ್ಬಂದಿ, ಆರೋಪಿಗಳಾದ ಬಾಬು ರಾಜೇಂದ್ರ ಪ್ರಸಾದ್ ಮತ್ತು ಭೂಷಣ್ನ ಕುಟುಂಬದ ಸದಸ್ಯರು ಸೇರಿದಂತೆ ಮತ್ತಿತರನ್ನು ಕೂಡಾ ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ.