ಅನಾರೋಗ್ಯದ ನೆಪವೊಡ್ಡಿದ ಸಿಸಿಬಿ ಎಸಿಪಿ

Karnataka Lokayukta 14 March 20
Published on

ಬೆಂಗಳೂರು: ಸಿಗರೇಟ್ ಸಗಟು ವ್ಯಾಪಾರಿಗಳಿಂದ ಲಕ್ಷಾಂತರ ರೂ. ಲಂಚ ಪಡೆದ ಪ್ರಕರಣದ ಸಂಬಂಧ ಅಮಾನತುಗೊಂಡಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದ ಬೆನ್ನಲ್ಲೇ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ.

ರೇಸ್​ಕೋರ್ಸ್ ರಸ್ತೆಯ ಖನಿಜಭವನದಲ್ಲಿರುವ ಎಸಿಬಿ ಕಚೇರಿಗೆ ಶುಕ್ರವಾರ ಮಧ್ಯಾಹ್ನ 12.15ಕ್ಕೆ ಆಗಮಿಸಿದ ಎಸಿಪಿ, ವಿಚಾರಣೆ ಎದುರಿಸಿದರು. ಆದರೆ, ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಗೊಂದಲದ ಹೇಳಿಕೆ ನೀಡಿದ್ದಾರೆ. ಲಂಚ ಪಡೆದಿರುವ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ವಿಚಾರಣೆ ಆರಂಭಿಸಿದ ಕೆಲ ಹೊತ್ತಿನಲ್ಲೇ ಮೈಕೈ ನೋವಾಗುತ್ತಿದ್ದು, ಈಗ ಚಿಕಿತ್ಸೆ ಪಡೆದು ಶನಿವಾರ ಮತ್ತೆ ವಿಚಾರಣೆಗೆ ಹಾಜರಾಗಲು ಅನುವು ಮಾಡಿಕೊಡುವಂತೆ ತನಿಖಾಧಿಕಾರಿಗಳ ಮುಂದೆ ಕೋರಿಕೊಂಡಿದ್ದರು. ಎಸಿಬಿ ತನಿಖಾಧಿಕಾರಿಗಳು ಇದಕ್ಕೆ ಸಮ್ಮತಿಸಿದ್ದು, ಶನಿವಾರ ವಿಚಾರಣೆಗೆ ಹಾಜರಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಅನಾರೋಗ್ಯದ ನೆಪವೊಡ್ಡಿ ವಾಪಸಾದ ಹಿನ್ನೆಲೆಯಲ್ಲಿ ಸೂಕ್ತ ರೀತಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಅಲ್ಲದೆ, ಅವರ ಮನೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಉಲ್ಲೇಖಿಸಿರುವ ಅಂಶ, ಆಸ್ತಿಪಾಸ್ತಿ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಇನ್​ಸ್ಪೆಕ್ಟರ್​ಗಳಾದ ಅಜಯ್ ಹಾಗೂ ನಿರಂಜನ್​ಕುಮಾರ್ ಎಸಿಬಿ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದಾರೆ.

ಎಫ್​ಐಆರ್ ರದ್ದುಕೋರಿ ಅರ್ಜಿ: ವ್ಯಾಪಾರಿಗಳಿಂದ ಹಣ ಸುಲಿಗೆ ಆರೋಪದಲ್ಲಿ ದಾಖಲಾಗಿರುವ ಎಫ್​ಐಆರ್ ರದ್ದುಕೋರಿ ಸಿಸಿಬಿ ಎಸಿಪಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಂತರ ಮನವಿ ಕುರಿತು ಜೂ. 3ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.'

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net