

ಮೂಡಲಗಿ: ಕುಂದಾನಗರಿ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅರಭಾವಿ ಹೋಬಳಿಯ ರಾಜಾಪುರ ಗ್ರಾಮದ ಶ್ರೀ ಚೂನಮ್ಮ್ಮದೇವಿ ದೇವಸ್ಥಾನ ಇತಿಹಾಸ ಪ್ರಸಿದ್ದವಾಗಿದೆ. ಶ್ರೀ ಚೂನಮ್ಮದೇವಿ, ದ್ಯಾಮವ್ವದೇವಿ ಪೌರಾಣಿಕ ಹಿನ್ನೆಲೆ ಹೊಂದಿದ್ದು ಪುರಾಣ ಕಾಲದ ಪ್ರಮುಖ ದೇವತೆಯಾಗಿದ್ದಾಳೆ. ಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ಸಂಗಮ ಸ್ಥಾನ ರಾಜಾಪುರ ಗ್ರಾಮಕ್ಕೆ ಸಮೀಪದಲ್ಲಿದೆ.
ಬಾದಾಮಿಯ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು ರಾಜಾಪುರ ಗ್ರಾಮ ಆಳಿದ್ದಾರೆ. ಬಳಿಕ ಕೆಲ ಕಾಲ ಬಿಜಾಪುರ ಸುಲ್ತಾನರು, ಸವಣೂರು ನವಾಬರು, ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗ್ರಾಮ ಇದಾಗಿದೆ. ಹೀಗೆ, ಹಲವಾರು ರಾಜ&ಮಹಾರಾಜರು ಆಳ್ವಿಕೆ ನಡೆಸಿದ ಕಾರಣಕ್ಕೆ ರಾಜರ+ಪುರ ಎಂದು ಹೆಸರು ಬಂದಿತು. ರಾಜರು ಆಳಿದ ಊರು ಯಾವುದೋ ಅದೇ ರಾಜಾಪುರ ಎಂದು ಬದಾಲಾಯಿತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆ ವೇಳೆ ಮುಂಬೈ ಸರ್ಕಾರದಿಂದ ಬೇರ್ಪಟ್ಟು ಕರ್ನಾಟಕದೊಂದಿಗೆ ಸೇರಿದ ಇತಿಹಾಸ ಇದೆ.
ಶ್ರೀ ಚೂನಮ್ಮದೇವಿಯ ಹಾಗೂ ದ್ಯಾಮವ್ವ ದೇವಿಯ ದೇವಸ್ಥಾನಗಳು ಚೌಕಾಕೃತಿಯಲ್ಲಿವೆ. ಆಧುನಿಕ ಶೈಲಿಯಲ್ಲಿ ನಿರ್ಮಿಸಿರುವ ದೇವಸ್ಥಾನದ ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಂಗ, ಅಂತರಾಳ, ಗರ್ಭಗೃಹ ಹೊಂದಿದೆ. ಗರ್ಭ ಗುಡಿಯ ಮೇಲೆ ಸುಂದರ ಗೋಪುರಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ತಮಿಳುನಾಡಿನ ಚೆನೈದಿಂದ ಶ್ರೀ ಚೂನಮ್ಮದೇವಿಯ ಮೂರ್ತಿ ತಂದು ಚೂನಿಮಟ್ಟಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ, ಇಲ್ಲಿಂದ ದಣ ದಿಕ್ಕಿಗೆ 5 ಕಿಮೀ ಅಂತರದಲ್ಲಿ ಇನ್ನೊಂದು ಚೂನಮ್ಮ್ಮದೇವಿಯ ದೇವಸ್ಥಾನವೂ ಇದೆ. ಈ ಸ್ಥಳದಲ್ಲಿ ಚೂನಮ್ಮದೇವಿ ದೇವಸ್ಥಾನ ಇರುವುದರಿಂದ ಚೂನಿಮಟ್ಟಿ ಎಂದು ಹೆಸರು ಬಂದಿದೆ. ಆರಂಭದಲ್ಲಿ ಅತ್ಯಂತ ಸಣ್ಣದಾಗಿದ್ದ ದೇವಸ್ಥಾನ ಕಾಲ ಕ್ರಮೇಣ ಗ್ರಾಮಸ್ಥರ ಸಹಕಾರದಿಂದ ಇಂದು ದೇವಸ್ಥಾನ ಅಭಿವೃದ್ಧಿಗೊಂಡು ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ.
ಗರ್ಭಗುಡಿಯ ಒಂದು ಕಡೆ ಶ್ರೀ ಚೂನಮ್ಮದೇವಿ, ಇನ್ನೊಂದು ಕಡೆ ಶ್ರೀ ದ್ಯಾಮವ್ವಾದೇವಿ ವಿಗ್ರಹಗಳಿವೆ. ಒಳ ಭಾಗದಲ್ಲಿ ಸುಂದರ ಕೆತ್ತನೆ ಪ್ರಮುಖ ಆಕರ್ಷಣೆಯಾಗಿದೆ. ಈ ಗುಡಿಯ ದಣ ಭಾಗದಲ್ಲಿ ಶ್ರೀ ಪಾಂಡುರಂಗ ಮಂದಿರ ಇದೆ. ಆಗ್ನೆಯ ದಿಕ್ಕಿನಲ್ಲಿ ಶ್ರೀ ಅಮೋಸಿದ್ಧ ದೇವಸ್ಥಾನ ನಿರ್ಮಾಣವಾಗಿದೆ. ಗುಡಿಯ ಮುಂಭಾಗದಲ್ಲಿ ದೀಪ ಸ್ತಂಭ ನಿರ್ಮಿಸಲಾಗಿದೆ. ಅಲ್ಲದೆ, ಗ್ರಾಮದಲ್ಲಿ ಶ್ರೀ ಬೀರಸಿದ್ದೇಶ್ವರ ದೇವಸ್ಥಾನ, ಸದ್ಗುರು ಸಮರ್ಥ ಶ್ರೀ ಮಾಧವಾನಂದ ಆಶ್ರಮ, ಶ್ರೀ ಆಂಜನೇಯ ಸ್ವಾಮಿ, ಶ್ರೀ ವೀರಭದ್ರೇಶ್ವರಸ್ವಾಮಿ, ಶ್ರೀ ದುರ್ಗಾದೇವಿ, ಶ್ರೀ ಯಲ್ಲಮ್ಮದೇವಿ ದೇವಸ್ಥಾನ, ಶ್ರೀ ಸತ್ಯ ಸಾಯಿ ಮಂದಿರಗಳಿದ್ದು, ಗ್ರಾಮದ ಕೀರ್ತಿ ಮತ್ತಷ್ಟು ಹೆಚ್ಚಿಸಿವೆ.
ಜಾತ್ರಾ ಮಹೋತ್ಸವ:
ರಾಜಾಪುರ ಗ್ರಾಮದಲ್ಲಿ ಮೇ 6ರಿಂದ ಗ್ರಾಮದೇವತೆಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, 10ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ. ಮೇ 7ರಂದು ಬೆಳಗ್ಗೆ 6 ಗಂಟೆಗೆ ಮೇಟಿ, ದೇಶಪಾಂಡೆ ಹಾಗೂ ಗ್ರಾಮದ ಹಿರಿಯರ ಸಮ್ಮ್ಮುಖದಲ್ಲಿ ರಥಕ್ಕೆ ಹಗ್ಗ ಹಚ್ಚುವ ಪೂಜಾ ಕಾರ್ಯಕ್ರಮ ಜರುಗಲಿವೆ.
ಮೇ 8ರಂದು ಸಂಜೆ 5 ಗಂಟೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿ ಗಣ್ಯರು ಕಾಲ್ನಡಿಗೆ ಮೂಲಕ ಗ್ರಾಮ ದೇವತೆ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆಯುವರು. ಚೂನಮ್ಮ್ಮದೇವಿ ಜಾತ್ರಾ ಉತ್ಸವ ಯುವ ಕಮಿಟಿ ವತಿಯಿಂದ ಸ್ವರ ಗೀತಾಂಜಲಿ ಆರ್ಕೆಸ್ಟ್ರಾ ಸಂಗೀತ ರಸ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇ 9 ರಂದು ಬೆಳಗ್ಗೆ 8 ಗಂಟೆಗೆ 5 ಕಿಮೀ ವರೆಗೆ ಗ್ರಾಮ ದೇವತೆ ಮಹಾರಥೋತ್ಸವ ಜರುಗಲಿದೆ. ಮೇ 10 ರಂದು ಜಂಗಿ ಕುಸ್ತಿ, ಸಕ್ಕರೆ ಹಂಚುವ ಕಾರ್ಯದೊಂದಿಗೆ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
> ಲೇಖಕರು: ರಮೇಶ ಶಿ. ಗುಂಡಪ್ಪಗೋಳ,