ಕಾಲರಾ ಆತಂಕ ಹಿನ್ನೆಲೆ ಆರೋಗ್ಯ ಇಲಾಖೆ ನಿಗಾ

Cholera
Published on

ಬೆಂಗಳೂರು: ನಗರದಲ್ಲಿ ಕಾಲರಾ ಆತಂಕದ ಹಿನ್ನೆಲೆ ಪ್ರಕರಣಗಳ ಕುರಿತು ನಿಗಾ ಇರಿಸಿರುವ ಆರೋಗ್ಯ ಇಲಾಖೆಯು ಶುದ್ಧ ಕುಡಿಯುವ ನೀರಿನ ಸೇವನೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ, ಕಾಲರಾ, ಕರುಳು ಬೇನೆ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತವೆ. ಹೀಗಾಗಿ, ರೋಗ ಹರಡುವಿಕೆ ತಡೆಗೆ ಕುಡಿಯುವ ನೀರು ಪರಿಶೀಲನೆ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಜನರು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಕಲುಷಿತ ನೀರು ಹಾಗೂ ಬೀದಿ ಬದಿ ತೆರೆದಿಟ್ಟ ಆಹಾರ ಸೇವನೆಯಿಂದ ಕಾಲರಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.

ಕಾಲರಾ ಲಕ್ಷಣಗಳು: ವಾಂತಿ, ಭೇದಿ, ನಿಶ್ಯಕ್ತಿ, ನಿರ್ಜಲೀಕರಣ, ಮೂತ್ರವಿಸರ್ಜನೆ ಆಗದಿರುವುದು, ವಿಪರೀತ ಬಾಯಾರಿಕೆ, ಸುಸ್ತು, ಅತಿಯಾದ ನಿದ್ದೆ, ತಲೆನೋವು, ತೂಕ ಇಳಿಕೆಯಂತಹ ಲಕ್ಷಣಗಳು ಕಾಲರಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಶೌಚಗೃಹ ಬಳಸಿದ ನಂತರ ಹಾಗೂ ಆಹಾರ ಸೇವಿಸುವ ಮೊದಲು ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದಿರಬೇಕು. ಮನೆಯ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ರೋಗದ ಬಗ್ಗೆ ಆತಂಕಕ್ಕೆ ಒಳಗಾಗದೆ ಮುನ್ನೆಚ್ಚರಿಕೆ ವಹಿಸುವ ಜತೆಗೆ ಚಿಕಿತ್ಸೆಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಇಲಾಖೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net