ಗಂಗಾಜಲ ಚೌಡೇಶ್ವರಿ ದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಮೂಹ

14-hvr-03
Published on

ರಾಣೆಬೆನ್ನೂರ: ನಗರದ ದೇವತೆ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಸೋಮವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಚೌಡೇಶ್ವರಿ ದೇವಿಯ ಮೂರ್ತಿಯನ್ನು ಮೂಲ ದೇವಸ್ಥಾನದಿಂದ ಮೆರವಣಿಗೆ ಮೂಲಕ ಗಂಗಾಜಲ ಚೌಡೇಶ್ವರಿ ದೇವಸ್ಥಾನಕ್ಕೆ ತಂದು ಸಾಂಪ್ರದಾಯಕ ಪೂಜೆ ಸಲ್ಲಿಸಿ, ಪ್ರತಿಷ್ಠಾಪಿಸಲಾಯಿತು. ನಂತರ ಮಹಾಪೂಜೆ, ಮಂಗಳಾರತಿ ಹಾಗೂ ಸಿಹಿ ನೈವೇದ್ಯ ಅರ್ಪಿಸಲಾಯಿತು. ರಾಜ್ಯ ಹಾಗೂ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ ಭಕ್ತರು ದೇವಿಗೆ ಉಡಿ ತುಂಬಿ, ಹರಕೆ ಸಲ್ಲಿಸಿದರು. ಇನ್ನು ಕೆಲವರು ಹಣ್ಣು-ಕಾಯಿ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು.

ಹೂವಿನ ವ್ಯಾಪಾರ ಬಲುಜೋರು: ಹೂವಿನ ಹರಕೆಗೆ ಪ್ರಸಿದ್ಧಿ ಪಡೆದ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಮಾರುಕಟ್ಟೆಗೆ ಹೂವಿನ ರಾಶಿಯೇ ಹರಿದು ಬಂದಿತ್ತು. ವ್ಯಾಪಾರ ಕೂಡ ಬಲು ಜೋರಾಗಿ ನಡೆಯಿತು. ಪ್ರತಿವರ್ಷ ದೇವಿಗೆ ಹರಿಕೆ ಸಲ್ಲಿಸುವ ಭಕ್ತರು 101 ರೂ., 1001 ರೂ.ಗಳಿಂದ ಲಕ್ಷ ರೂ. ವರೆಗೂ ಹೂವಿನ ಮಾಲೆಗಳನ್ನು ಅರ್ಪಿಸುವುದು ಜಾತ್ರೆಯ ವಿಶೇಷ. ಈ ಹಿನ್ನೆಲೆಯಲ್ಲಿ 5ರಿಂದ 25 ಅಡಿಯವರೆಗಿನ ಸುಗಂಧಿ, ಸೇವಂತಿಗೆ, ಮಲ್ಲಿಗೆ ಹೂವಿನ ಮಾಲೆಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ಭಕ್ತರು ದೇವಿಗೆ ಹರಕೆ ಹೊತ್ತ ಬೆಲೆಗೆ ತಕ್ಕಂತೆ ಮುಗಿಬಿದ್ದು ಮಾಲೆಗಳನ್ನು ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net