ಬರಹಗಾರರಲ್ಲಿರಲಿ ಸಾಮಾಜಿಕ ಜವಾಬ್ದಾರಿ: ತಿಪ್ಪಣ್ಣ ಮರಿಕುಂಟೆ ಸಲಹೆ

ಚಳ್ಳಕೆರೆಯ ಕನ್ನಡ ಕೌಸ್ತುಭ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಕಲರವ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಿಗೆ ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಪ್ರಮಾಣ ಪತ್ರ ವಿತರಿಸಿದರು. ಮೋದೂರು ತೇಜ, ಡಿ. ಶಬ್ರೀನಾ ಮಹಮ್ಮದ್ ಅಲಿ, ಮನುಶ್ರೀ ಸಿದ್ದಾಪುರ, ರಾಜು ಸೂಲೇನಹಳ್ಳಿ ಇದ್ದರು.
ಚಳ್ಳಕೆರೆಯ ಕನ್ನಡ ಕೌಸ್ತುಭ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಕಲರವ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಿಗೆ ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಪ್ರಮಾಣ ಪತ್ರ ವಿತರಿಸಿದರು. ಮೋದೂರು ತೇಜ, ಡಿ. ಶಬ್ರೀನಾ ಮಹಮ್ಮದ್ ಅಲಿ, ಮನುಶ್ರೀ ಸಿದ್ದಾಪುರ, ರಾಜು ಸೂಲೇನಹಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕತೆ, ಕವನ ವಾಚ್ಯವಾಗಬಾರದು
  • ಸಾಹಿತ್ಯ ರಚನೆಗೆ ಆಳ ಅಧ್ಯಯನ, ನಿರಂತರ ಓದು ಅಗತ್ಯ
  • ಕನ್ನಡ ಕಲರವದಲ್ಲಿ 30ಕ್ಕೂ ಹೆಚ್ಚು ಕವಿಗಳಿಂದ ಕವನ ವಾಚನ
ಚಳ್ಳಕೆರೆ : ಬರಹಗಾರರಲ್ಲಿ ಕಡ್ಡಾಯವಾಗಿ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.

ನಗರದ ಎಚ್‌ಎಂಎಸ್ ಬಡಾವಣೆಯ ಕನ್ನಡ ಕೌಸ್ತುಭ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ 'ಕನ್ನಡ ಕಲರವ' ಕಾರ್ಯಕ್ರಮ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಬದುಕನ್ನು ಪ್ರೀತಿಸುವವನಿಗೆ ಬರಹದ ಮೌಲ್ಯ ತಿಳಿಯುತ್ತದೆ. ಕವಿಯಾದವನಿಗೆ ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಇರಬೇಕು. ಸಮಾಜವನ್ನು ಅರ್ಥೈಸಿಕೊಂಡು ಸಾಹಿತ್ಯ ರಚಿಸಬೇಕು. ಕತೆ, ಕವನ ವಾಚ್ಯವಾಗಬಾರದು, ಇದಕ್ಕೆ ಆಳ ಅಧ್ಯಯನ ಮತ್ತು ಶ್ರದ್ಧೆ ಇರಬೇಕು" ಎಂದು ತಿಪ್ಪಣ್ಣ ಮರಿಕುಂಟೆ ತಿಳಿಸಿದರು.

ಸಾಹಿತ್ಯ ವಲಯದಲ್ಲಿ ವಯಸ್ಸಿನ ಭೇದಭಾವ ಎಣಿಸಬಾರದು. ಬರವಣಿಗೆಯಲ್ಲಿ ತೀಕ್ಷ್ಣತೆ ಮತ್ತು ದೂರದೃಷ್ಟಿ ಚಿಂತನೆ ಇರಬೇಕು. ಯುವ ಬರಹಗಾರರು ಮತ್ತೊಬ್ಬರ ಸಾಹಿತ್ಯ ಓದುವ ಅಭೀರುಚಿ ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನದಿಂದ ಮಾತ್ರ ಸಮಾಜಕ್ಕೆ ಉತ್ತಮ ಸಾಹಿತ್ಯ ಕೊಡಲು ಸಾಧ್ಯವಾಗಲಿದೆ ಎಂದು ಅವರು ಸಲಹೆ ನೀಡಿದರು.

ಕನ್ನಡ ಸಾಹಿತ್ಯಕ್ಕೆ ದೊಡ್ಡ ಪರಂಪರೆ

ಕತೆಗಾರ ಮೋದೂರು ತೇಜ ಮಾತನಾಡಿ, "ಕನ್ನಡ ಸಾಹಿತ್ಯಕ್ಕೆ ದೊಡ್ಡ ಪರಂಪರೆ ಇದೆ. ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ನಮ್ಮ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ಕವಿ ಮತ್ತು ಕಲಾವಿದರ ಮೇಲಿದೆ" ಎಂದರು.

ಕವಯತ್ರಿ ಡಿ. ಶಬ್ರೀನಾ ಮಹಮ್ಮದ್ ಅಲಿ ಮಾತನಾಡಿ, "ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸುವುದರಿಂದ ಮಾತ್ರ ಉತ್ತಮ ಸಾಹಿತ್ಯ ಹುಟ್ಟಲು ಸಾಧ್ಯ. ಇದಕ್ಕೆ ಜನರ ನೋವು, ಬದುಕಿನ ಬವಣೆ ಅರ್ಥಮಾಡಿಕೊಳ್ಳಬೇಕು. ಸಾಹಿತ್ಯ ಓದಿಸಿಕೊಳ್ಳುವಂತಿರಬೇಕು, ಅರ್ಥವಿಲ್ಲದ ಬರಹ ರಚನೆ ಆಗಬಾರದು" ಎಂದು ಸಲಹೆ ನೀಡಿದರು. ಸಾಹಿತ್ಯಾಸಕ್ತರು ನಿರಂತರ ಓದಿನ ಜತೆಗೆ ಪ್ರಗತಿಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕವನ ವಾಚನ

ಕವಿಗೋಷ್ಠಿಯಲ್ಲಿ ಸಿದ್ದಾಪುರ ಮನುಶ್ರೀ, ಪಗಡಲಬಂಡೆ ನಾಗೇಂದ್ರಪ್ಪ, ಕೆ.ಎಚ್. ಜಯಪ್ರಕಾಶ್, ರಾಜು ಸೂಲೇನಹಳ್ಳಿ, ಜಿ. ಪಾಲಯ್ಯ, ಬೆಳಗಟ್ಟ ನಾಗರಾಜ, ಟಿ.ಎಚ್. ಜಯಮೂರ್ತಿ, ಜಗದೀಶ್, ಕವಿತಾಕುಶ, ಬಸವರಾಜ್, ಎಂ.ಟಿ. ಹರ್ಷವರ್ಧನ ಸೇರಿ 30ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net