ಗಾಯತ್ರಿ ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ತಲುಪಿದ ನೀರು Reservoir

ಹಿರಿಯೂರು ತಾಲೂಕಿನ ಗಾಯತ್ರಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ತಲುಪಿರುವ ನೀರು. Reservoir
ಹಿರಿಯೂರು ತಾಲೂಕಿನ ಗಾಯತ್ರಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ತಲುಪಿರುವ ನೀರು. Reservoir
Published on

ಪ್ರಮುಖ ಮುಖ್ಯಾಂಶಗಳು

  • ಜೆಜಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಪಾತಾಳ ಸೇರಿದ ಅಂತರ್ಜಲ
  • ಜೀವ ಜಲಕ್ಕೆ ಹಾಹಾಕಾರ ಬಹು ಗ್ರಾಮ ಯೋಜನೆಗೆ ಬರ
ಖಂಡೇನಹಳ್ಳಿ ಬಸವರಾಜ್, ಹಿರಿಯೂರು
ತಾಲೂಕಿನ ಕರಿಯಾಲ ಸಮೀಪದ ಗಾಯತ್ರಿ ಜಲಾಶಯದಲ್ಲಿನ ನೀರು ಡೆಡ್ ಸ್ಟೋರೆಜ್ ತಲುಪಿದ್ದು, ಕಲುವಳ್ಳಿ ಭಾಗದಲ್ಲಿ ಅಂತರ್ಜಲ ಪಾತಾಳ ಸೇರುತ್ತಿದ್ದು ಜೀವ ಜಲಕ್ಕೆ ಜನ-ಜಾನುವಾರು ಪರಿತಪಿಸುವಂತಾಗಿದೆ. Reservoir
ಮೈಸೂರಿನ ಅರಸರು ಬಯಲು ಸೀಮೆಗೆ ನೀಡಿದ ಕಾಣಿಕೆ ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯ. 2020, 2023, 2025 ರಲ್ಲಿ ವರುಣನ ಕೃಪೆಯಿಂದ ವಿವಿ ಸಾಗರದಲ್ಲಿ ನೀರು ತುಂಬಿಕೊಂಡಿದೆ. 0.97 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಗಾಯತ್ರಿ ಜಲಾಶಯದಲ್ಲಿ ಮಾತ್ರ ನೀರು ಡೆಡ್ ಸ್ಟೋರೇಜ್(ತಳ ಹಂತದ) ತಲುಪಿದೆ.
ಬೋರನಕಣಿವೆ, ಬುಕ್ಕಾಪಟ್ಟಣ, ಬೆಳ್ಳಾರ ಭಾಗದ ಮೈದಾನ ಪ್ರದೇಶದಿಂದ ಹರಿದು ಬರುವ ಸುವರ್ಣಮುಖಿ ನದಿಯ ಟಿಸಿಲುಗಳ ನೀರು ಜಲಾಶಯದ ಜಲ ಮೂಲ. ಜೆ.ಜಿ. ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಇತ್ತೀಚೆಗೆ ಬೋರನಕಣಿವೆ ಜಲಾಶಯದಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಲಾಗಿತ್ತು. ಪ್ರಸ್ತುತ ಜಲಾಶಯದಲ್ಲಿ 2 ಅಡಿ ನೀರು ಸಂಗ್ರಹವಿದೆ.
ಜೀವ ಜಲಕ್ಕೆ ಹಾಹಾಕಾರ: ಜೆ.ಜಿ. ಹಳ್ಳಿ ಹೋಬಳಿ ವ್ಯಾಪ್ತಿಯ 38 ಹಳ್ಳಿಗಳಿಗೆ ಶಾಶ್ವತ ಕುಡಿವ ನೀರು ಒದಗಿಸುವ ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದೆ. ವಿವಿಧ ಹಳ್ಳಿಗಳಿಗೆ ಕುಡಿವ ನೀರಿನ ಸಂಪರ್ಕ ಕಲ್ಪಿಸಲು ಅಳವಡಿಸಿರುವ ಪೈಪ್‌ಲೈನ್ ಪಿಟ್ನೆಸ್ ಪರೀಕ್ಷಿಸಲು ಟ್ರಯಲ್ ರನ್‌ಗೆ ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲ.
42ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ: ಜೆ.ಜಿ. ಹಳ್ಳಿ, ಐಮಂಗಲ ಹೋಬಳಿ, ವಿವಿಪುರ ಗ್ರಾಪಂನ ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ಜೆ.ಜಿ.ಹಳ್ಳಿ ಹೋಬಳಿಯಲ್ಲಿ ನೂರಾರು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಮೋಟಾರ್, ಪಂಪ್ ಅಳವಡಿಸುವ ವೇಳೆಗೆ ಅಂತರ್ಜಲ ಕುಸಿದು ನೀರಿನ ಸಮಸ್ಯೆ ಎದುರಾಗಿತ್ತಿದೆ. 42 ರೀ-ಬೋರ್ ಮಾಡಲಾಗಿದೆ, ಅಂತರ್ಜಲ ಪಾತಾಳ ತಲುಪಿರುವುದು ಅಧಿಕಾರಿಗಳನ್ನು ಹೈರಾಣಾಗಿಸಿದೆ. ಗ್ರಾಮೀಣ ಭಾಗದಲ್ಲಿ ಜನರು ಕುಡಿವ ನೀರಿಗೆ ಪ್ರತಿ ನಿತ್ಯ ಖಾಲಿ ಕೊಡ ಹಿಡಿದು ಪ್ರತಿಭಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಿಂಡಾವರ, ಗುದಿಯಜ್ಜನಹಟ್ಟಿ, ಹೊಸೂರು, ಭೋವಿ ಕಾಲನಿ, ಪಾಲದೇವರಹಟ್ಟಿ, ಸೂರಪ್ಪನಹಟ್ಟಿ ಹೊಸಹಟ್ಟಿ, ಸರಸ್ವತಿಹಟ್ಟಿ, ಪಿಲಾಲಿ ಲಂಬಾಣಿ ತಾಂಡಾ, ಮಾವಿನಮಡು, ದುಗ್ಗಣಿ ಹಟ್ಟಿ, ಜುಂಜಪ್ಪನಹಟ್ಟಿ, ಲಾಯರ್ ದಾಸನಹಳ್ಳಿ ಇತರೆಡೆ ಕುಡಿವ ನೀರಿಗೆ ತೀವ್ರ ಸಮಸ್ಯೆಯಾಗಿದೆ.
ಪ್ರಸಕ್ತ ವರ್ಷ ತಾಪಮಾನ ಏರಿಕೆ, ಮುಂಗಾರು ಮಳೆ ಕೊರತೆ, ಅಂತರ್ಜಲ ಕುಸಿತ ಜನರನ್ನು ಸಂಕಷ್ಟಕ್ಕೆ ದೂಡಿದೆ. ಒಂದು ವಾರದಲ್ಲಿ ಮಳೆ ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದ್ದು, ನೀರಿನ ಹಾಹಾಕಾರ ಮಿತಿ ಮೀರಿದೆ. ವರುಣ ಕೃಪೆ ತೋರಿ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು ಭರ್ತಿಯಾದರೆ ಮಾತ್ರ ಜಲ ಸಂಕಷ್ಟದಿಂದ ಮುಕ್ತಿ ಪಡೆಯಬಹುದು.
ಅಧಿಕಾರಿಗಳು ಎಸ್‌ಆರ್‌ಐ, ಉಪ ಚುನಾವಣೆ, ಇಲಾಖೆ ಕೆಲಸದಲ್ಲಿ ಮಗ್ನರಾಗಿದ್ದು, ತಾಲೂಕಿನಲ್ಲಿ ಸುಧಾಕರ್ ಅಕಾಲಿಕ ಮರಣದಿಂದ ಜನಪ್ರತಿನಿಧಿಗಳು ಇಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ತಾಲೂಕಿನಲ್ಲಿ ಆಳುವವರು ಇಲ್ಲ, ಜನರ ಸಮಸ್ಯೆ ಆಲಿಸುವವರು ಇಲ್ಲ ಎನ್ನುವಂತಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ, ಜನರ ಸಮಸ್ಯೆ ಆಲಿಸುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.
ಮೇವಿನ ಕೊರತೆ: ಕಳೆದ ವರ್ಷ ಹಿಂಗಾರು, ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆಯಿಂದ ಜಾನುವಾರುಗಳ ಮೇವಿಗೆ ಸಂಕಷ್ಟ ಎದುರಾಗಿದೆ. ಕುರಿ, ಮೇಕೆ, ಜಾನುವಾರು ನೀರು-ಮೇವಿಗೆ ಪರದಾಡುವಂತಾಗಿದೆ.
ವಿವಿ ಸಾಗರದಲ್ಲಿ ಜಲ ವೈಭವ
ಜೀವನಾಡಿ ವಿವಿ ಸಾಗರದಲ್ಲಿ ಪ್ರಸ್ತುತ 122 ಅಡಿ ನೀರು ಸಂಗ್ರಹವಿದೆ. ಭವಿಷ್ಯದಲ್ಲಿ ಕಲುವಳ್ಳಿ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ವಿವಿ ಸಾಗರ ಜಲಾಶಯದಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸುವ ಯೋಜನೆ ರೂಪಿಸುವ ಅನಿವಾರ್ಯತೆ ಇದೆ. ಕಲುವಳ್ಳಿ ಭಾಗದಲ್ಲಿ ಕೃಷಿ ಅಂತರ್ಜಲ ಅವಲಂಭಿಸಿದೆ. ಈ ಭಾಗದ ಭೂಮಿಯಲ್ಲಿ ಕಲ್ಲು ಬಂಡೆ ಹಾಸು ಇರುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗುವುದಿಲ್ಲ. ಹೀಗಾಗಿ ಇಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದೆ, 800-1000 ಅಡಿ ಕೊಳವೆ ಬಾವಿ ಕೊರೆದರೂ ಒಂದೆರಡು ತಿಂಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ತಾಲೂಕಿನಲ್ಲಿ ಅಡಿಕೆ ಕೃಷಿ ವಿಸ್ತರಣೆಯಿಂದ ಅತಿಯಾದ ನೀರು ಬಳಕೆಯಿಂದ ಅಂತರ್ಜಲ ಬರಿದಾಗುತ್ತದೆ.

ವಿವಿ ಸಾಗರದಿಂದ ನೇರವಾಗಿ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸಲು ಈ ಹಿಂದೆ ಡಿಪಿಆರ್ ಮಾಡಿಸಲಾಗಿತ್ತು. ನೀರಿನ ಹಂಚಿಕೆ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ. ಈ ಬಗ್ಗೆ ಸಿಎಂ ಹಾಗೂ ಜಲ ಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗಿದೆ. ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸಿದರೆ ಮಾತ್ರ ಕಲುವಳ್ಳಿ ಭಾಗದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

— ಕೆ. ಪೂರ್ಣಿಮಾ ಶ್ರೀನಿವಾಸ್ ಮಾಜಿ ಶಾಸಕಿ

ಜೀವನಾಡಿ ವಿವಿ ಸಾಗರ ಬಯಲು ಸೀಮೆಯ ಪ್ರಮುಖ ಜಲಪಾತ್ರೆ. ಭದ್ರಾ ಮೆಲ್ದಂಡೆ ಯೋಜನೆಯಲ್ಲಿ ಕನಿಷ್ಠ 10 ಟಿಎಂಸಿ ನೀರು ಮೀಸಲಿಟ್ಟು, ಹಿರಿಯೂರು-ಶಿರಾ ತಾಲೂಕಿನ ಗಡಿ ಭಾಗದ ಗಾಯತ್ರಿ ಜಲಾಶಯಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಬೇಕಾಗಿದೆ.

— ಶ್ರೀ ನಂಜಾವಧೂತ ಸ್ವಾಮೀಜಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net