

ಹೊಳಲ್ಕೆರೆ: ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲಿಗೆ ಈ ಮೊದಲಿನಂತೆ ರಾಮಗಿರಿಯಲ್ಲಿ ನಿಲುಗಡೆ ಮುಂದುವರಿಸಲಾಗಿದೆ. ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಅವರು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಿದ ನಂತರ ನಿಲುಗಡೆ ಮುಂದುವರಿಸುವ ಭರವಸೆ ಸಿಕ್ಕಿದ್ದು, ಶನಿವಾರದಿಂದಲೇ ನಿಲುಗಡೆ ಮಾಡಲಾಗುತ್ತಿದೆ. ರಾಮಗಿರಿಯಲ್ಲಿ ಶುಕ್ರವಾರ ರೈಲು ನಿಲುಗಡೆಯಾಗಿರಲಿಲ್ಲ. ಆದರೆ ರಾಮಗಿರಿಗೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಜನ, ರೈಲಿನ ಚೈನ್ ಎಳೆದು ನಿಲ್ಲಿಸಿ ರೈಲ್ವೇ ಸ್ಟೇಷನ್‌ನಲ್ಲಿ ಗಲಾಟೆ ಮಾಡಿದ್ದರು. ನಿಲುಗಡೆ ಇಲ್ಲ ಎಂದ ಮೇಲೆ ಟಿಕೆಟ್ ನೀಡಿದ್ದೇಕೆ? ಎಂದು ಪ್ರಶ್ನೆ ಮಾಡಿದ್ದರು. ರಾಮಗಿರಿ ರೈಲು ನಿಲ್ದಾಣದಲ್ಲಿ ವಿಶ್ವ ಮಾನವ ಎಕ್ಸ್‌ಪ್ರೆಸ್‌ಗೆ ಎಂದಿನಂತೆ ನಿಲುಗಡೆ ನೀಡಬೇಕು ಎಂದು ರಾಮಗಿರಿ ಗ್ರಾಮಸ್ಥರು ಶನಿವಾರ ಚಿತ್ರದುರ್ಗದಲ್ಲಿ ಸಂಸದ ಗೋವಿಂದ ಎಂ. ಕಾರಜೋಳರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಕಳೆದ ಮೂರುವರೆ ವರ್ಷಗಳಿಂದ ವಿಶ್ವ ಮಾನವ ರೈಲಿಗೆ ನಿಲುಗಡೆ ಕಲ್ಪಿಸಲಾಗಿದ್ದು, ಇಲ್ಲಿಂದ ಇಲಾಖೆಗೆ ಪ್ರತಿ ತಿಂಗಳು ಎರಡೂವರೆ ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದೆ. ಬೇರೆ ನಿಲ್ದಾಣಗಳಿಂದ ಆಗಮಿಸುವ ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಾಗಿದೆ. ಆದರೂ ರೈಲು ನಿಲುಗಡೆ ರದ್ದು ಮಾಡಿರುವುದು ಸರಿಯಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಗುರುವಾರ, ಶುಕ್ರವಾರ ನಿಲುಗಡೆ ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಇದೇ ರೈಲು ಗಾಡಿ ಇನ್ನೂ ತಾತ್ಕಾಲಿಕ ನಿಲುಗಡೆ ಎಂದೇ ತೋರಿಸಲಾಗುತ್ತಿದ್ದು, ಖಾಯಂಗೊಳಿಸಬೇಕು. ಈ ಬಗ್ಗೆ ತಾವು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈಲ್ವೆ ಇಲಾಖೆ ಆದಾಯ ಕೊರತೆ ಕಾರಣ ನಿಲುಗಡೆ ರದ್ದು ಮಾಡಿದ್ದಾರೆ. ಪ್ರತಿದಿನ ಕನಿಷ್ಠ 16 ಸಾವಿರ ರೂ. ಆದಾಯ ನಿರೀಕ್ಷಿಸಿದ್ದಾರೆ. ಈಗಾಗಲೇ ಜನರಲ್ ಮ್ಯಾನೇಜರ್ ಹಾಗೂ ರೈಲ್ವೆ ಕಾರ್ಯದರ್ಶಿ ಜತೆ ಮಾತನಾಡಿದ್ದು, ರೈಲು ನಿಲುಗಡೆ ಮುಂದುವರಿಸಲು ಒಪ್ಪಿದ್ದಾರೆ. ಶನಿವಾರದಿಂದಲೇ ನಿಲುಗಡೆ ಮುಂದುವರಿಯಲಿದೆ. ಕಾಯಂ ನಿಲುಗಡೆಗೆ ಸಚಿವ ಸೋಮಣ್ಣ ಅವರ ಬಳಿ ಮಾತನಾಡುವೆ ಎಂದು ಭರವಸೆ ನೀಡಿದರು.
ರಾಮಗಿರಿಯಲ್ಲಿ ವಿಶ್ವಮಾನವ ರೈಲಿಗೆ ನಿಲುಗಡೆ ಸೌಕರ್ಯ ಮುಂದುವರಿಸಬೇಕು ಎಂದು ಒತ್ತಾಯಿಸಿ ಭಾನುವಾರ ರೈಲು ತಡೆ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳು ನಿಲುಗಡೆ ಮುಂದುವರಿಸುವ ಭರವಸೆ ನೀಡಿ, ಶನಿವಾರದಿಂದಲೇ ನಿಲುಗಡೆ ಮಾಡುತ್ತಿರುವುದರಿಂದ ರೈಲು ತಡೆ ಚಳವಳಿ ಕೈಬಿಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.