ಹಿರಿಯೂರು ತಾಲೂಕಿನ ಸಂಗೇನಹಳ್ಳಿ-ಶಿಡ್ಲಯ್ಯನ ಕೋಟೆ ಗ್ರಾಮ ಬಳಿ ಹರಿವ ವೇದಾವತಿ ನದಿ ಚಿತ್ರಣ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವೇದಾವತಿ ನದಿಗೆ ಅಡ್ಡವಾಗಿ ತೂಗು ಸೇತುವೆ
ಸಂಗೇನಹಳ್ಳಿ, ಸುತ್ತಮುತ್ತಲಿನ ಗ್ರಾಮಸ್ಥರ ದಶಕಗಳ ಕನಸು
ನದಿಯ ಎರಡು ದಂಡೆಯ ಹಳ್ಳಿಗರಿಗೆ ಸಂಪರ್ಕ ಕೊಂಡಿ
ವರ್ಷಪೂರ್ತಿ ಕೃಷಿ ಚಟುವಟಿಕೆಗಳಿಗೆ ನೀರು ಲಭ್ಯ
ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ವೇದಾವತಿ ನದಿಗೆ ಅಡ್ಡವಾಗಿ ತೂಗು ಸೇತುವೆ ನಿರ್ಮಿಸಬೇಕು ಎಂಬ ಸಂಗೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ತಾಲೂಕಿನ ಸಂಗೇನಹಳ್ಳಿ-ಶಿಡ್ಲಯ್ಯನಕೋಟೆ ಬಳಿ ದಕ್ಷಿಣ ದಿಕ್ಕಿನಿಂದ ಉತ್ತರಾಭಿಮುಖವಾಗಿ ಹರಿಯುವ ವೇದಾವತಿ ನದಿಗೆ ತೂಗು ಸೇತುವೆ ಮತ್ತು ಬ್ಯಾರೇಜ್ ನಿರ್ಮಿಸಿದರೆ ನದಿಯ ಎರಡು ದಂಡೆಯ ಹಳ್ಳಿಗರಿಗೆ ಸಂಪರ್ಕ ಕೊಂಡಿಯಾಗುತ್ತದೆ. ವರ್ಷಪೂರ್ತಿ ಕೃಷಿ ಚಟುವಟಿಕೆಗಳಿಗೆ ನೀರು ಲಭ್ಯವಾಗಲಿದೆ.
2015ರಲ್ಲಿ ವೇದಾವತಿ ನದಿ ತುಂಬಿ ಹರಿದ ಸಂದರ್ಭದಲ್ಲಿ ಜನರ ಒತ್ತಾಯಕ್ಕೆ ಮಣಿದ ಶಾಸಕ ಡಿ. ಸುಧಾಕರ್ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸರ್ವೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಅನುದಾನ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.
ಪ್ರಸ್ತುತ ಜಿಲ್ಲಾ ಸಚಿವರು ತೂಗು ಸೇತುವೆ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿದ್ದು. ಸೇತುವೆ ನಿರ್ಮಾಣಕ್ಕೆ 13 ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗಿದೆ.
ಮಲೆನಾಡು ಮಾದರಿ ಸೇತುವೆ: ರಾಜ್ಯದ ಮಲೆನಾಡು ಭಾಗದಲ್ಲಿ ತೂಗು ಸೇತುವೆ ಕಾಣಬಹುದು. ಮಂಗಳೂರಿನಲ್ಲಿರುವ ತೂಗು ಸೇತುವೆ ನಿರ್ಮಾಣ ತಜ್ಞರಿಂದ ಸರ್ವೆ ಮಾಡಿಸಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಸಚಿವ ಡಿ. ಸುಧಾಕರ್ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಂಡೆಯ ಎರಡೂ ಭಾಗದ ಹಳ್ಳಿಗರಿಗೆ ಮಳೆಗಾಲದಲ್ಲಿ ನದಿ ದಾಟಲು ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆಯಾಗಿದೆ. ಸಂಗೇನಹಳ್ಳಿ ಗ್ರಾಮಕ್ಕೆ ಸಾರಿಗೆ ಸಂಪರ್ಕ ಇಲ್ಲದ ಕಾರಣ ನದಿ ತುಂಬಿ ಹರಿದರೆ ಗ್ರಾಮದ ಶಾಲಾ ಮಕ್ಕಳು, ರೈತರು, ಕೂಲಿ ಕಾರ್ಮಿಕರು ಐದಾರು ಕಿ.ಮೀ. ಸುತ್ತಿಕೊಂಡು ಶಿಡ್ಲಯ್ಯನಕೋಟೆ ಮತ್ತು ರಂಗೇನಹಳ್ಳಿ, ಚಳ್ಳಕೆರೆಗೆ ತೆರಳಬೇಕಾದ ಪರಿಸ್ಥಿತಿ ಇದೆ. ಸೇತುವೆ ನಿರ್ಮಾಣವಾದರೆ ಗ್ರಾಮಗಳ ನಡುವೆ ಸುಲಭವಾಗಿ ಸಂಪರ್ಕ ಸಾಧ್ಯವಾಗಲಿದೆ.
ನದಿ ಪಾತ್ರದಲ್ಲಿ ನಿರಂತರ ಮರಳುಗಾರಿಕೆಯಿಂದ ಆಳುದ್ದದ ಗುಂಡಿಗಳು ಉಂಟಾಗಿವೆ. ಇವುಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವುದರಿಂದ ಓಡಾಟಕ್ಕೆ ತೊಂದರೆ ಆಗುತ್ತದೆ. ಗ್ರಾಮದ 25-30 ವಿದ್ಯಾರ್ಥಿಗಳು ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಶಿಡ್ಲಯ್ಯನಕೋಟೆ, ರಂಗೇನಹಳ್ಳಿ, ಕಲಮರಹಳ್ಳಿಯ ಪ್ರೌಢಶಾಲೆ ಹಾಗೂ ಕಾಲೇಜಿಗೆ ತೆರಳುತ್ತಾರೆ.
ರೈತರು ಪ್ರತಿ ನಿತ್ಯ ಜಮೀನುಗಳಿಗೆ ತೆರಳಲು, ಗ್ರಾಮಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಲು ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ನಗರಗಳಿಗೆ ಹೋಗಲು ಅನಿವಾರ್ಯವಾಗಿ ನದಿ ದಾಟಬೇಕಿದೆ.
ಸರಣಿ ಚೆಕ್ ಡ್ಯಾಂ: ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ 18-20 ಟಿಎಂಸಿ ನೀರು ವೇದಾವತಿ ನದಿಗೆ ಹರಿದಿದೆ. ಪ್ರತಿ ವರ್ಷ ಜಲಾಶಯದಿಂದ ನದಿ ಮೂಲಕ ಚಳ್ಳಕೆರೆ ತಾಲೂಕಿಗೆ 0.25 ಟಿಎಂಸಿ ನೀರು ಮೀಸಲಿಟ್ಟಿದ್ದು, ನದಿ ಪಾತ್ರದಲ್ಲಿ ಸರಣಿ ಚೆಕ್‌ಡ್ಯಾಂ ನಿರ್ಮಿಸಿದ್ದು, ವರ್ಷಪೂರ್ತಿ ನದಿಯಲ್ಲಿ ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳು ನದಿ ದಾಟುವುದು ಸಾಧ್ಯವಿಲ್ಲ.
ತೂಗು ಸೇತುವೆಗಳನ್ನು ಬಹುತೇಕ ಮಲೆನಾಡು ಭಾಗದಲ್ಲಿ ಮಾತ್ರ ಕಾಣಬಹುದು. ಬಯಲು ಸೀಮೆಯಲ್ಲಿ ಎಲ್ಲಿಯೂ ನಿರ್ಮಾಣವಾಗಿಲ್ಲ.
2022 ರಿಂದ ಮೂರು ಬಾರಿ ವಿವಿ ಸಾಗರ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ವೇದಾವತಿ ನದಿಗೆ ಜೀವ ಕಳೆ ಬಂದಿದೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಧರ್ಮಪುರ ಏತ ನೀರಾವರಿ ಯೋಜನೆಗೆ ವರದಾನವಾಗಿದೆ.
"
ತೂಗು ಸೇತುವೆ ಕನಸು ಶೀಘ್ರ ನನಸಾಗಲಿದೆ. ಮಂಗಳೂರಿನಿಂದ ತಜ್ಞರನ್ನು ಕರೆಸಿ ಸ್ಥಳ ಪರಿಶೀಲನೆ ನಂತರ ಅಗತ್ಯ ಅನುದಾನ ನೀಡಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.