

ಪ್ರಮುಖ ಮುಖ್ಯಾಂಶಗಳು
ಕೊರ್ಲಕುಂಟೆ ತಿಪ್ಪೇಸ್ವಾಮಿ, ಚಳ್ಳಕೆರೆ
ಹಣ್ಣುಗಳ ರಾಜ 'ಮಾವು' ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನಗರದ ಪಾವಗಡ ರಸ್ತೆ ಇನ್ನಿತರ ಕಡೆಗಳಲ್ಲಿ ಜನರ ಗಮನ ಸೆಳೆಯುತ್ತಿವೆ. ತಮ್ಮ ಅಚ್ಚುಮೆಚ್ಚಿನ ಹಣ್ಣುಗಳ ಖರೀದಿಗೆ ಮಾವು ಪ್ರಿಯರು ಮುಂದಾಗುತ್ತಿದ್ದಾರೆ. mangoes
ವರ್ಷದ ಒಂದು ಕಾಲಾವಧಿಯಲ್ಲಿ ಸಿಗುವ ಮಾವು ಸವಿಯಲು ಜನರು ಸೀಸನ್‌ಗಾಗಿ ಕಾದಿರುತ್ತಾರೆ. 'ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು' ಎಂಬ ಗಾದೆಯಂತೆ, ಆರೋಗ್ಯಕ್ಕೆ ಒಳ್ಳೆಯದೆಂದು ಅನೇಕರು ಮಾವಿನ ಹಣ್ಣಿಗೆ ಹಂಬಲಿಸುವುದೂ ಉಂಟು.
ಮಾವಿನ ತಳಿಗಳ ಪೈಕಿ ಮಲ್ಲಿಕಾ ಕೆಜಿಗೆ 100 ರೂ., ಕೇಸರಿ 70 ರೂ., ಬೆನಿಷಾ 70 ರೂ., ಸಿಂಧೂರ 60 ರೂ., ತೋತಾಪುರಿ 50 ರೂ., ಬಾದಾಮಿ 70 ರೂ. ಬೆಲೆ ಇದೆ. ಹಣ್ಣಿನ ಗುಣಮಟ್ಟ, ಗಾತ್ರದ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸಗಳಿವೆ.
ರಸ್ತೆ ಬದಿ ವ್ಯಾಪಾರಿಗಳು ದಿನಕ್ಕೆ 150-200 ಕೆಜಿ ಮಾವು ಮಾರಾಟ ಮಾಡುತ್ತಿದ್ದು, ದಿನಕ್ಕೆ 700-800 ರೂ. ಲಾಭ ದೊರೆಯುತ್ತದೆ ಎನ್ನುತ್ತಾರೆ ನಾಗಗೊಂಡನಹಳ್ಳಿ ಜಿ. ಲಲಿತಮ್ಮ, ಬುಡ್ನಹಟ್ಟಿ ನಿಂಗಮ್ಮ
ಆಂಧ್ರದ ಕುಂದಿಪಿರ್, ಅಪಲೇನಹಳ್ಳಿ ಮತ್ತು ಪಾವಗಡ ತಾಲೂಕು ಬೆಳ್ಳಿಬಟ್ಲು ಕಡೆಗಳಿಂದ ನಗರಕ್ಕೆ ಮಾವು ಸರಬರಾಜಾಗುತ್ತಿದೆ. ರೈತರಿಂದ ಕಾಯಿ ಖರೀದಿಸುವ ಮಧ್ಯವರ್ತಿಗಳು ಕೆಲವು ದಿನಗಳ ಕಾಲ ಭತ್ತದ ಹುಲ್ಲಿನಲ್ಲಿ ಇರಿಸಿ ಹಣ್ಣಾದ ಕೂಡಲೇ ಮಾರುಕಟ್ಟೆಗೆ ಒಯ್ದು 40 ಕೆಜಿ ತೂಕಕ್ಕೆ 800 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ.
ಚಳ್ಳಕೆರೆ ತಾಲೂಕಿನಲ್ಲಿ 276 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಕಸಬಾ ಮತ್ತು ಪರಶುರಾಮಪುರ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಒಂದು ಮರ ಸುಮಾರು 40 ವರ್ಷಗಳ ಕಾಲ ಫಸಲು ಕೊಡುತ್ತದೆ.
ತೋಟಗಾರಿಕಾ ಇಲಾಖೆಯಿಂದ ಎನ್. ಮಹದೇವಪುರ, ಚಿತ್ರಹಳ್ಳಿ, ಮೊಳಕಾಲ್ಮೂರು, ಹಾಲರಾಮೇಶ್ವರ ಸೇರಿ 10 ಫಾರ್ಮ್‌ಗಳಲ್ಲಿ ಮಾವಿನ ಸಸಿ ಬೆಳೆಸಿ, ರೈತರಿಗೆ ವಿತರಿಸುವ ವ್ಯವಸ್ಥೆಯಿದೆ. ಇದರೊಟ್ಟಿಗೆ ಖಾಸಗಿ ನರ್ಸರಿಗಳು ಸಹ ರೈತರಿಗೆ ಸಸಿಗಳನ್ನು ಒದಗಿಸುತ್ತಿವೆ. ಹೀಗಾಗಿ ತಾಲೂಕಿನಲ್ಲಿ ಮಾವಿನ ತೋಟ ವಿಸ್ತರಣೆಯಾಗಿದೆ.
ಹನಿ ನೀರಾವರಿ ಸೌಲಭ್ಯದಿಂದ ಮಾವು ಬೆಳೆಯುವ ರೈತರಿಗೆ 1 ಹೆಕ್ಟೇರ್‌ಗೆ ಎನ್.ಎಚ್.ಆರ್ (NHR) ಯೋಜನೆಯಡಿ 30 ಸಾವಿರ ರೂ. ಸಬ್ಸಿಡಿ, ಮಳೆ, ಗಾಳಿಯಿಂದ ಬೆಳೆ ನಷ್ಟವಾದರೆ ವಿಮಾ ಸೌಲಭ್ಯ ಸಿಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್. ಕುಮಾರ್.