

ಪ್ರಮುಖ ಮುಖ್ಯಾಂಶಗಳು
ಹಿರಿಯೂರು: ದೇಶದಲ್ಲಿ ಸಹಕಾರ ಚಳವಳಿಯು ಪ್ರಗತಿ ಪಥದಲ್ಲಿ ಸಾಗಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೊಡುಗೆ ಮತ್ತು ದೂರದೃಷ್ಟಿ ಅಪಾರವಾದುದು ಎಂದು ಜಿಲ್ಲಾ ಸಚಿವರಾದ ಡಿ. ಸುಧಾಕರ್ ಅವರು ಅಭಿಪ್ರಾಯಪಟ್ಟರು.
ಹಿರಿಯೂರಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರಾಜ್ಯ ಸಹಕಾರ ಮಂಡಳಿ, ಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ವಿವಿಧ ಪತ್ತಿನ ಸಹಕಾರ ಸಂಘಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಚಿವ ಡಿ. ಸುಧಾಕರ್ ಅವರು, "ಸಹಕಾರ ತತ್ವದ ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರ ನಂಬಿಕೆ ಇತ್ತು. ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅವರು ಸಹಕಾರ ತತ್ವದ ಮೂಲಕ ಬಲವಾದ ಅಡಿಪಾಯ ಹಾಕಿದರು. ಪಂಚವಾರ್ಷಿಕ ಯೋಜನೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದ ನೆಹರೂ, ದೇಶದ ಆರ್ಥಿಕ ಹೆಬ್ಬಾಗಿಲು ಇದೇ ಕ್ಷೇತ್ರ ಎಂದು ನಂಬಿದ್ದರು. ಅವರ ಈ ದೂರದೃಷ್ಟಿಯ ಫಲವಾಗಿ ಇಂದು ಸಹಕಾರ ಚಳವಳಿಯು ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ" ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಸಹಕಾರ ಸಂಘಗಳಿಗೆ ಸೂಕ್ತ ಶಕ್ತಿ ತುಂಬುವ ಮೂಲಕ, ಗ್ರಾಮೀಣ ಪ್ರದೇಶದ ರೈತರು, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಹಾಗೂ ಮಹಿಳೆಯರ ಸ್ವಾಭಿಮಾನದ ಬದುಕಿಗೆ ನೆರವಿನ ಹಸ್ತ ಚಾಚಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಜಗದೀಶ್ ಅವರು, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಪ್ರಗತಿ ಪಥದಲ್ಲಿ ಸಾಗಲು ಸಚಿವ ಡಿ. ಸುಧಾಕರ್ ಅವರ ಕೊಡುಗೆಯನ್ನು ಸ್ಮರಿಸಿದರು.
"ಸಹಕಾರ ಕ್ಷೇತ್ರವು ಬಡವರು, ರೈತರು, ಮಹಿಳಾ ಸಂಘಗಳು ಮತ್ತು ಕೂಲಿ ಕಾರ್ಮಿಕರ ಸ್ವಾವಲಂಬಿ ಬದುಕಿಗೆ ವರದಾನವಾಗಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ನಿರ್ದೇಶಕ ಎಂ.ಎಸ್. ಈರಲಿಂಗೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾಳಿಗೆ, ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಕೆ. ಲಕ್ಷ್ಮಿ, ಶಿಮೂಲ್ ಹಾಲು ಒಕ್ಕೂಟದ ನಿರ್ದೇಶಕ ಸಂಜೀವಮೂರ್ತಿ ಸೇರಿದಂತೆ ಹಲವಾರು ಗಣ್ಯರು ಮತ್ತು ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.