ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಮುಹೂರ್ತ ಫಿಕ್ಸ್ congress

ಹಿರಿಯೂರಿನ ನೆಹರು ಮೈದಾನದಲ್ಲಿ ನುಡಿ ನಮನ ಕಾರ್ಯಕ್ರಮದ ಸಿದ್ಧತೆ ದೃಶ್ಯ. congress
ಹಿರಿಯೂರಿನ ನೆಹರು ಮೈದಾನದಲ್ಲಿ ನುಡಿ ನಮನ ಕಾರ್ಯಕ್ರಮದ ಸಿದ್ಧತೆ ದೃಶ್ಯ. congress
Published on

ಪ್ರಮುಖ ಮುಖ್ಯಾಂಶಗಳು

  • ನುಡಿ ನಮನ ಕಾರ್ಯಕ್ರಮದಲ್ಲಿ ಹೆಸರು
  • ಆಕಾಂಕ್ಷಿಗಳಲ್ಲಿ ಕುತೂಹಲ
ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಇಲ್ಲಿನ ನೆಹರು ಮೈದಾನದಲ್ಲಿ ಜು.26ರಂದು ಆಯೋಜಿಸಿರುವ ದಿ. ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ. congress
ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ಸವಾಲು ಎದುರಿಸಲು ಕಾಂಗ್ರೆಸ್ ಈಗಾಗಲೇ ರಾಜಕೀಯ ತಂತ್ರ ರೂಪಿಸಿದ್ದು, ಜಿಪಂ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಕೈ ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರ ಸಂಘಟನಾ ಸಮಾವೇಶ, ರೋಡ್ ಶೋ ಮೂಲಕ ಅಖಾಡಕ್ಕೆ ಇಳಿದಿರುವುದು ರಾಜಕೀಯವಾಗಿ ಸಂಚಲನ ಮೂಡಿಸಿದೆ. ನುಡಿ ನಮನ ಕಾರ್ಯಕ್ರಮಕ್ಕೂ ಒಂದು ದಿನ ಮೊದಲು ಸಿಎಂ. ಡಿ.ಕೆ.ಶಿವಕುಮಾರ್ ಹಿರಿಯೂರಿಗೆ ಭೇಟಿ ನೀಡುತ್ತಿದ್ದು, ನಾಡ ದೊರೆಯ ಸ್ವಾಗತಕ್ಕೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ನಗರದಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳ ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಶನಿವಾರ ಬೆಳಗ್ಗೆ 10.30ಕ್ಕೆ ತಾಲೂಕು ಕ್ರೀಡಾಂಗಣದಲ್ಲಿನ ಹೆಲಿಪ್ಯಾಡ್‌ಗೆ ಸಿಎಂ ಆಗಮಿಸಲಿದ್ದು, ಜಿಲ್ಲೆಯ ಶಾಸಕರು, ಮುಖಂಡರು ಮುಖ್ಯಮಂತ್ರಿಯನ್ನು ಸ್ವಾಗತಿಸಲಿದ್ದಾರೆ. ರಸ್ತೆ ಮೂಲಕ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಜು.26 ರಂದು ದಿ. ಸುಧಾಕರ್ ನುಡಿ-ನಮನ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಉಪ ಚುನಾವಣೆ ರಣಕಹಳೆ ಮೊಳಗಿಸಲು ವೇದಿಕೆ ಸಜ್ಜಾಗಿದೆ. ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗುತ್ತಿದ್ದು, 10 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಸಿಎಂ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಂತ್ರಿಗಳು, ಜಿಲ್ಲೆಯ ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಸುಧಾಕರ್ ಕುಟುಂಬಸ್ಥರು ಸೇರಿದಂತೆ ಟಿಕೆಟ್ ಆಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಗಲಿದ ನಾಯಕರ ಕುಟುಂಬಕ್ಕೆ ಟಿಕೆಟ್: ದಿ. ಸುಧಾಕರ್ ನಿಧನದಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಶೀಘ್ರ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪರಂಪರೆಯಂತೆ ಅಗಲಿದ ನಾಯಕರ ಕುಟುಂಬಕ್ಕೆ ಟಿಕೆಟ್ ನೀಡುವ ಪದ್ಧತಿ ಇದೆ. ಅದರಂತೆ ಸುಹಾಸ್ ಸುಧಾಕರ್‌ಗೆ ಟಿಕೆಟ್ ಪಕ್ಕಾ ಎನ್ನಲಾಗಿದ್ದರೂ, ಕೊನೆ ಕ್ಷಣದಲ್ಲಿ ಜಾತಿ ಲೆಕ್ಕಾಚಾರ, ರಾಜಕೀಯ ಲಾಭ-ನಷ್ಟ, ಜನ ಬೆಂಬಲ, ಹಣ ಬಲದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ ಎನ್ನಲಾಗಿದೆ.
ನಂಗೂ ಬೇಕು, ನಿಂಗೂ ಬೇಕು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎನ್ನುವುದು ಪೈಪೋಟಿಗೆ ಕಾರಣ. ದಿ. ಸುಧಾಕರ್ ಪುತ್ರ ಸುಹಾಸ್, ವಿಶ್ವೇಶ್ವರಯ್ಯ ಜಲ ನಿಗಮದ ನಿವೃತ್ತ ಅಧಿಕಾರಿ ಸಣ್ಣಚಿತ್ತಯ್ಯ, ಜಿಪಂ. ಮಾಜಿ ಸದಸ್ಯ ಸಿ.ಬಿ.ಪಾಪಣ್ಣ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ಜೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಆರ್.ಮಂಜುನಾಥ್ ಅವಕಾಶ ಸಿಕ್ಕರೆ ಸ್ಪರ್ಧೆಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಅವರು ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಗೇಮ್‌ಚೇಂಜರ್ ಪಾತ್ರ ನಿರ್ವಹಿಸುವ ದಲಿತ ಮುಖಂಡ ಜಿ.ಎಸ್.ಮಂಜುನಾಥ್ 2013, 2023 ರ ಚುನಾವಣೆಯಲ್ಲಿ ಸುಧಾಕರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಾಜಿ ಶಾಸಕಿ ಕೆ.ಪೂರ್ಣಿಮಾ ಅವಕಾಶ ಸಿಕ್ಕರೆ ಅದೃಷ್ಟ ಪರೀಕ್ಷೆಗೆ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಕಾಡುಗೊಲ್ಲರ ಟಿಕೆಟ್ ಬೇಡಿಕೆ: ತುಮಕೂರು-ಚಿತ್ರದುರ್ಗ ಜಿಲ್ಲೆಯಲ್ಲಿ 10ರಿಂದ 12 ಕ್ಷೇತ್ರದಲ್ಲಿ ಕಾಡುಗೊಲ್ಲರು ನಿರ್ಣಾಯಕ ಪಾತ್ರ ವಹಿಸಲಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಎಸ್ಪಿ ಮೀಸಲು ಸೌಲಭ್ಯದ ಭರವಸೆ ನೀಡಿದ್ದರಿಂದ ತುಮಕೂರು-ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಿಜೆಪಿಯಿಂದ ಕಾಂಗ್ರೆಸ್‌ನತ್ತ ಸೆಳೆಯಲು ಉಪ ಚುನಾವಣೆಯಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಸಣ್ಣಚಿತ್ತಯ್ಯ ಅಖಾಡಕ್ಕೆ ಇಳಿದಿದ್ದು, ಸಿಎಂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಕೈಹಿಡಿಯಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಕಾಡುಗೊಲ್ಲ, ಇತರ ತಳ ಸಮುದಾಯದ ಮುಖಂಡರು ಈಗ ಸಣ್ಣಚಿತ್ತಯ್ಯ ಬೆಂಬಲಕ್ಕೆ ನಿಂತಿರುವುದು ಸುಹಾಸ್ ಸುಧಾಕರ್‌ಗೆ ರಾಜಕೀಯವಾಗಿ ಹಿನ್ನಡೆಯಾಗಲಿದೆ ಎಂಬ ಚರ್ಚೆ ಶುರುವಾಗಿದೆ.
ಬಂಪರ್ ಕೊಡುಗೆ: ತಾಲೂಕಿನ ಗಾಯತ್ರಿ ಜಲಾಶಯ-16 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 244 ಕೋಟಿ ರೂ. ಮಂಜೂರು ಮಾಡುವ ಮೂಲಕ ತಾಲೂಕಿಗೆ ಸಿಎಂ ಬಂಪರ್ ಕೊಡುಗೆ ನೀಡಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಹಿರಿಯೂರು ತಾಲೂಕಿಗೆ ಸಿಎಂ ಡಿ.ಕೆ. ಶಿವಕುಮಾರ್ ಬಂಪರ್ ಕೊಡುಗೆ ನೀಡಿದ್ದು, ಜೆ.ಜಿ. ಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ತುಂಬಿಸಲು 244 ಕೋಟಿ ರೂ. ಮಂಜೂರು ಮಾಡಿರುವುದು ನನ್ನ ತಂದೆಯ ಕನಸು ನನಸಾಗಿದೆ. ಮಾತು ಕೊಟ್ಟಂತೆ ನಡೆದುಕೊಳ್ಳುವ ಪಕ್ಷವಾಗಿರುವುದರಿಂದ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಇದೆ.

— ಸುಹಾಸ್ ಸುಧಾಕರ್ ಕಾಂಗ್ರೆಸ್ ಮುಖಂಡ

ಉಪ ಚುನಾವಣೆ ದಿನಾಂಕ ಘೋಷಣೆ ನಂತರ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ. 40 ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು, ಈ ಬಾರಿ ಟಿಕೆಟ್ ಸಿಗುವ ವಿಶ್ವಾಸವಿದೆ.

— ಆರ್.ಮಂಜುನಾಥ್ ಕೆಪಿಸಿಸಿ ಉಪಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net