ಮೈದಾಳಿದ ಹಸಿರ ವನಸಿರಿ School

ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಭರಮಸಾಗರದ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯ ಕೈತೋಟ. School
ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಭರಮಸಾಗರದ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯ ಕೈತೋಟ. School
Published on

ಪ್ರಮುಖ ಮುಖ್ಯಾಂಶಗಳು

  • ಶಾಲೆ ಆವರಣದಲ್ಲಿ ತಲೆ ಎತ್ತಿದ ಹಣ್ಣು, ತರಕಾರಿ ಬೆಳೆಗಳು
ಸಿ.ಎಂ. ನಾಡಿಗೇರ್, ಭರಮಸಾಗರ
ಪಠ್ಯ, ಪರೀಕ್ಷೆಗೆ ಸೀಮಿತವಾಗದೆ ತೋಟ ಗಾರಿಕೆ ಚಟುವಟಿಕೆ ಮೂಲಕ ಭರಮಸಾಗರ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆ ಆವರಣ ಹಚ್ಚ ಹಸಿರಿನೊಂದಿಗೆ ಗಮನ ಸೆಳೆದಿದೆ. School
ಮುಖ್ಯ ಶಿಕ್ಷಕ ಜಿ.ಸಿ.ಎಚ್. ಗೊಂಚಿಗಾರ್ ಅವರ ಪರಿಶ್ರಮ, ಪರಿಸರ ಕಾಳಜಿಯ ಫಲವಾಗಿ ಕಳೆದ 3 ವರ್ಷಗಳಿಂದ ಶಾಲೆ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸಿದ್ದು, ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಿದೆ.
ಒಂದು ಕಾಲದಲ್ಲಿ ಬರಡಾಗಿದ್ದ ಜಾಗದಲ್ಲಿ ಇಂದು ಪಪ್ಪಾಯಿ, ಬಾಳೆ, ತೆಂಗು, ಅಡಿಕೆ, ವಿವಿಧ ಹಣ್ಣಿನ ಮರಗಳು, ಔಷಧೀಯ ಸಸ್ಯಗಳು, ತರಕಾರಿಗಳು, ಸೊಪ್ಪು, ಅಲಂಕಾರಿಕ ಹೂವಿನ ಗಿಡಗಳು ಹಾಗೂ ನೆರಳು ನೀಡುವ ನೂರಾರು ಮರಗಳು ಬೆಳೆದು ನಿಂತಿವೆ.
ಪಠ್ಯದ ಜತೆಗೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಲು ಪ್ರಾಯೋಗಿಕವಾಗಿ ತೋಟಗಾರಿಕೆ ಚಟುವಟಿಕೆಗೆ ಚಾಲನೆ ನೀಡಲಾಯಿತು. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಗಿಡ ನೆಡುವುದು, ನೀರು ಹಾಕುವುದು, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಗಿಡಗಳ ಆರೈಕೆಯಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ನೀರಿನ ಮಿತವ್ಯಯದೊಂದಿಗೆ ಸಾವಯವ ಕೃಷಿ ಅಳವಡಿಸಿಕೊಂಡು ಗಿಡಗಳ ಪೋಷಣೆ ಮಾಡಲಾಗಿದೆ. ಕೃಷಿಯ ತಂತ್ರಗಳನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ.
ಸಾವಯವ ಕೃಷಿ: ಶಾಲೆ ಆವರಣದಲ್ಲಿ ಬೀಳುವ ಎಲೆಗಳು ಹಾಗೂ ಜೈವಿಕ ತ್ಯಾಜ್ಯ ಸಂಗ್ರಹಿಸಿ ಎರೆಹುಳು ಗೊಬ್ಬರ ತಯಾರಿಸಿ, ಶಾಲೆಯ ಕೈ ತೋಟಕ್ಕೆ ಬಳಸಲಾಗುತ್ತಿದೆ. ವಿದ್ಯಾರ್ಥಿಗಳೇ ಗೊಬ್ಬರ ತಯಾರಿಕೆಯಲ್ಲಿ ಭಾಗವಹಿಸಿ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಇದರೊಟ್ಟಿಗೆ ಜೇನು ಸಾಕಾಣಿಕೆ, ಔಷಧೀಯ ಸಸ್ಯ, ಹೂ ಗಿಡಗಳ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಪರಿಸರ ದಿನಾಚರಣೆ ಮತ್ತಿತರ ಸಂದರ್ಭಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಶಾಲೆ ಆವರಣದಲ್ಲಿ ಹಸಿರು ಸಂಪತ್ತನ್ನು ವಿಸ್ತರಿಸಲಾಗಿದೆ.
ಶಾಲೆ ಆವರಣದ ಮರಗಳ ಕೆಳಗೆ ಕಾಂಕ್ರಿಟ್ ಬೆಂಚುಗಳನ್ನು ಹಾಕಲಾಗಿದ್ದು, ಕುಳಿತು ವಿದ್ಯಾರ್ಥಿಗಳು ಅಧ್ಯಯನ ನಡೆಸಲು, ವಿಶ್ರಾಂತಿ ಪಡೆಯಲು ಅನುಕೂಲಕರವಾಗಿದೆ.
ಬಿಸಿಯೂಟಕ್ಕೆ
ತರಕಾರಿ ಬಳಕೆ: ಶಾಲೆಯ ಕೈ ತೋಟದಲ್ಲಿ ಬೆಳೆಯುವ ತಾಜಾ ತರಕಾರಿ, ಸೊಪ್ಪನ್ನು ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ದೊರೆತ ಉತ್ಪನ್ನಗಳನ್ನು ಇತರ ಶಾಲೆಗಳಿಗೂ ಪೂರೈಸಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆ. ಶಾಲೆಯಲ್ಲಿ ಪಠ್ಯದೊಟ್ಟಿಗೆ ಕೃಷಿ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತಿದೆ. ಸಾವಯವ ಕೃಷಿ, ಸಸ್ಯ ಸಂರಕ್ಷಣೆ ಹಾಗೂ ಪ್ರಾಯೋಗಿಕ ಕೃಷಿ ವಿಧಾನಗಳನ್ನು ಇಲ್ಲಿ ಕಲಿಯುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಶಾಲೆಗಳಿಗೆ ಮಾದರಿ: ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಕೃಷಿ, ಪರಿಸರ ಸಂರಕ್ಷಣೆ, ಜೇನು ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ ಯಂತಹ ಪ್ರಾಯೋಗಿಕ ಕಲಿಕೆಯನ್ನು ಒಟ್ಟಿಗೆ ಅಳವಡಿಸಿಕೊಂಡಿರುವ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ.
ತಜ್ಞರಿಂದ ತರಬೇತಿ: ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೃಷಿ, ಸಾವಯವ ಪದ್ಧತಿ, ಪರಿಸರ ಸಂರಕ್ಷಣೆ ಮತ್ತು ತೋಟಗಾರಿಕೆ ಕುರಿತು ತರಬೇತಿ ನೀಡಲಾಗುತ್ತಿದೆ.

ವಿದ್ಯಾರ್ಥಿಗಳು ಪಠ್ಯದ ಜತೆಗೆ ಜೀವನಕ್ಕೆ ಅವಶ್ಯಕವಾದ ಕೌಶಲಗಳನ್ನು ಕಲಿಯಬೇಕು ಎಂಬ ಉದ್ದೇಶದಿಂದ ಈ ತೋಟ ಬೆಳೆಸಿದ್ದೇವೆ. ಮುಂದಿನ ದಿನಗಳಲ್ಲಿ ಮಿನಿ ಕೃಷಿ ಹೊಂಡ ನಿರ್ಮಿಸಿ ಇನ್ನಷ್ಟು ಪ್ರಾಯೋಗಿಕ ತರಬೇತಿ ನೀಡುವ ಯೋಜನೆ ಇದೆ. ಈ ಕೆಲಸದಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಕೈಜೋಡಿಸಿದ್ದಾರೆ. ಶಿಕ್ಷಣದ ಜತೆಗೆ ಕೃಷಿಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂಬುದೇ ನಮ್ಮ ಗುರಿ.

— ಜಿ.ಸಿ.ಎಚ್. ಗೊಂಚಿಗಾರ್ ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net