ಸರ್ಕಾರವೇ ಬೆಳೆವಿಮೆ ಪಾವತಿಸಲಿ ಇಲ್ಲವೇ ನಷ್ಟದ ಪರಿಹಾರ ಕೊಡಲಿ

ಹಿರಿಯೂರು ತಾಲೂಕು ಸೂರಗೊಂಡನಹಳ್ಳಿಯ ತಿಪ್ಪೇಸ್ವಾಮಿ ಅವರ ಹೊಲದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿಜೆಪಿ ಬರ ಅಧ್ಯಯನ ತಂಡ ವೀಕ್ಷಿಸಿತು. ಆರ್. ಅಶೋಕ್, ಬೈರತಿ ಬಸವರಾಜ್, ಕೆ.ಎಸ್. ನವೀನ್, ಕೆ.ಟಿ. ಕುಮಾರಸ್ವಾಮಿ, ವೆಂಕಟೇಶ್ ಯಾದವ್ ಇತರರು ಇದ್ದರು. Compensation
ಹಿರಿಯೂರು ತಾಲೂಕು ಸೂರಗೊಂಡನಹಳ್ಳಿಯ ತಿಪ್ಪೇಸ್ವಾಮಿ ಅವರ ಹೊಲದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿಜೆಪಿ ಬರ ಅಧ್ಯಯನ ತಂಡ ವೀಕ್ಷಿಸಿತು. ಆರ್. ಅಶೋಕ್, ಬೈರತಿ ಬಸವರಾಜ್, ಕೆ.ಎಸ್. ನವೀನ್, ಕೆ.ಟಿ. ಕುಮಾರಸ್ವಾಮಿ, ವೆಂಕಟೇಶ್ ಯಾದವ್ ಇತರರು ಇದ್ದರು. Compensation
Published on

ಪ್ರಮುಖ ಮುಖ್ಯಾಂಶಗಳು

  • ಬರ ಅಧ್ಯಯನ ತಂಡಕ್ಕೆ ರೈತರ ಮನವಿ
  • ಸೂರಗೊಂಡನಹಳ್ಳಿ ರೈತರ ಜಮೀನುಗಳಿಗೆ ಭೇಟಿ
ಹಿರಿಯೂರು: ಬೆಳೆವಿಮೆ ಮಾಡಿಸಿ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಬಿತ್ತನೆಗೆ ಲಕ್ಷಾಂತರ ರೂ. ಖರ್ಚಾಗಿದ್ದು, ಬೀಜಗೊಬ್ಬರಕ್ಕೆ ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ. ಬೆಳೆ ವಿಮೆ ಕಂತು ಪಾವತಿಸಲು ನಮ್ಮಲ್ಲಿ ಹಣವಿಲ್ಲ. ಸರ್ಕಾರವೇ ವಿಮಾ ಕಂತು ಪಾವತಿಸಬೇಕು. ಇಲ್ಲವಾದರೆ ಎಲ್ಲ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡಿಸಬೇಕು ಎಂದು ರೈತರು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಮನವಿ ಮಾಡಿದರು. Compensation
ಬರ ಅಧ್ಯಯನಕ್ಕೆಂದು ತಾಲೂಕಿನ ಸೂರ ಗೊಂಡನಹಳ್ಳಿಗೆ ಬುಧವಾರ ಭೇಟಿ ನೀಡಿ ರೈತ ತಿಪ್ಪೇಸ್ವಾಮಿ ಅವರ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆ ವೀಕ್ಷಿಸಿದ ಆರ್. ಅಶೋಕ್ ನೃತೃತ್ವದ ತಂಡಕ್ಕೆ ರೈತರು ತಾವು ಎದುರಿಸುತ್ತಿರುವ ಸಂಕಷ್ಟವನ್ನು ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ನಿಮ್ಮ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದಾರೆಯೇ? ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಶಾಸಕ ಬೈರತಿ ಬಸವರಾಜ್, ಎಂಎಲ್‌ಸಿ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಮುಖಂಡರಾದ ಆರ್. ರಾಜಣ್ಣ, ಕೆ. ಅಭಿನಂದನ್, ಆರ್. ಲಕ್ಷ್ಮೀಕಾಂತ್, ವಿ. ವಿಶ್ವನಾಥ್, ಆಲೂರು ತಮ್ಮಣ್ಣ, ದ್ಯಾಮಣ್ಣ, ಎನ್. ಧನಂಜಯ, ಸಂಪತ್ ಕುಮಾರ್, ಜಗದೀಶ್, ನಿತಿನ್, ಯೋಗೇಶ್, ಹನುಮಂತು, ಪ್ರದೀಪ್, ಗೋವಿಂದ್, ಬಸವರಾಜ್, ಜೋಧಾ, ದೇವರಾಜ್, ಮಲ್ಲೇಶ್ ಇತರರಿದ್ದರು.
ಸರ್ಕಾರದ ಕಿವಿ ಹಿಂಡಲು ರೈತರ ಮನವಿ
ಮೊಳಕಾಲ್ಮೂರು: ಬೆಳೆ ನಷ್ಟದಿಂದ ಒಪ್ಪತ್ತಿನ ಗಂಜಿಗೂ ಪರಿತಪಿಸುವ ಪರಿ ಇದೆ. ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ, ಸೂಕ್ತ ಪರಿಹಾರ ಘೋಷಣೆಗೆ ಸರ್ಕಾರದ ಕಿವಿ ಹಿಂಡಬೇಕು ಎಂದು ರೈತರು ಬಿಜೆಪಿ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬರ ಅಧ್ಯಯನ ತಂಡ ಬುಧವಾರ ರಾಂಪುರದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಜನರ ಅಹವಾಲುಗಳನ್ನು ಸ್ವೀಕರಿಸುವ ವೇಳೆ ರೈತರು ಸಮಸ್ಯೆಗಳನ್ನು ಹೇಳಿಕೊಂಡರು.
ಮೊಳಕಾಲ್ಮೂರು ಸದಾ ಬರಪೀಡಿತ ಪ್ರದೇಶವಾಗಿದ್ದು, ಸಂಗಷ್ಟಗಳನ್ನು ಎದುರಿಸುತ್ತಿರುವ ಇಲ್ಲಿನ ಜನ ಜೀವನ ನಡೆಸುವುದೇ ದೊಡ್ಡ ಸವಾಲಾಗಿದೆ. ಪೂರ್ವ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಬೆಳೆ ನಷ್ಟ ಪರಿಹಾರ ಘೋಷಣೆ ಆಗಬೇಕು. ರಾಜಕಾರಣಿಗಳು ಪ್ರಚಾರ ಗಿಟ್ಟಿಸಿಕೊಳ್ಳುವ ಬದಲು ಇಲ್ಲಿನ ಜನ ಅನುಭವಿಸುತ್ತಿರುವ ನೋವಿನ ನೈಜತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಸೂಕ್ತ ಆರ್ಥಿಕ ನೆರವು ಕಲ್ಪಿಸಲು ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಆರ್. ಅಶೋಕ್ ಪ್ರತಿಕ್ರಿಯಿಸಿ, ನಿಮ್ಮ ಕಷ್ಟ ಕಾರ್ಪುಣ್ಯಗಳನ್ನು ಆಲಿಸಲೆಂದೇ ಬಂದಿದ್ದೇವೆ. ಇಲ್ಲಿನ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಅದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸಬೇಕಾಗಿದೆ. ಬರ ನಿರ್ವಹಣೆಗೆ ತಾಲೂಕಿಗೆ ಒಂದು ಕೋಟಿ ರೂ. ಮೀಸಲಿಡುವ ಸರ್ಕಾರದ ನಡೆಯನ್ನು ಒಪ್ಪುವುದಿಲ್ಲ. ಈ ಮೊತ್ತದಲ್ಲಿ ಒಂದು ಹಳ್ಳಿಗೆ 50 ಸಾವಿರ ರೂ. ಸಹ ಸಿಗುವುದಿಲ್ಲ. ಒಂದು ಕ್ಷೇತ್ರಕ್ಕೆ ಕನಿಷ್ಠ 50 ಕೋಟಿ ಬಿಡುಗಡೆ ಮಾಡಬೇಕು. ಬೆಳೆ ಹಾನಿಗೆ ತುತ್ತಾದ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಕೊಡಬೇಕು. ರೈತರಿಗೆ ನ್ಯಾಯಕೊಡಿಸುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ ಸರ್ಕಾರ ಕುರುಡು ವರ್ತನೆ ತೋರುತ್ತಿದೆ. ಸರ್ಕಾರಕ್ಕೆ ರೈತರ ಶಾಪ ತಟ್ಟದೇ ಇರಲ್ಲ. ಶೀಘ್ರ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net