ಬರಕ್ಕೆ ಸೊರಗುತ್ತಿವೆ ಜಿಲ್ಲೆಯ ಕೆರೆ ಕಟ್ಟೆಗಳು

ಚಿತ್ರದುರ್ಗ ತಾಲೂಕಿನ ಸಿದ್ಧಾಪುರ ಗ್ರಾಮದ ಕೆರೆ ಸಂಪೂರ್ಣ ಖಾಲಿಯಾಗಿರುವುದು.
ಚಿತ್ರದುರ್ಗ ತಾಲೂಕಿನ ಸಿದ್ಧಾಪುರ ಗ್ರಾಮದ ಕೆರೆ ಸಂಪೂರ್ಣ ಖಾಲಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಕರ ಮೊಗದಲ್ಲಿ ಕಾಣದ ಮಂದಹಾಸ
  • ವರುಣನ ಕೃಪೆಯಾಗದಿದ್ದರೆ ಕುಡಿವ ನೀರಿನ ಸಮಸ್ಯೆ ಉಲ್ಬಣ
  • ಟ್ಯಾಂಕರ್ ಮೂಲಕ ಸರಬರಾಜು

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ


ವರುಣನ ಅವಕೃಪೆಯಿಂದ ಜಿಲ್ಲೆಯ ಜಲಮೂಲಗಳಾದ ಕೆರೆ ಕಟ್ಟೆಗಳು ಬರಿದಾಗುತ್ತಿವೆ. ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ.
ಅಂತರ್ಜಲ ಸಹಜವಾಗಿ ಕುಸಿಯತೊಡಗಿದೆ. ಲಭ್ಯವಿರುವ ಜಲಾಶಯಗಳು ಮತ್ತು ಕೆರೆಗಳ ನೀರನ್ನು ಕುಡಿಯುವ ನೀರಿನ ಸಮ ಸ್ಯೆ ಪರಿಹಾರಕ್ಕೆ ಮಾತ್ರ ಬಳಸಿಕೊಳ್ಳಬೇಕು. ಕೃಷಿಗೆ ಬಳಸುವಂತಿಲ್ಲವೆAದು ಈಗಾಗಲೇ ಸರ್ಕಾರ ಆದೇಶಿಸಿದೆ. ಒಂದು ಕಡೆ ಕುಡಿಯುವ ನೀರಿಲ್ಲದಿದ್ದರೆ ಹೇಗೆ? ಎಂಬ ಪ್ರಶ್ನೆ. ಮತ್ತೊಂದೆಡೆ ಕೃಷಿಯಲ್ಲಿ ತೊಡಗುವಂತಿಲ್ಲವೆAಬ ಆತಂಕ ಮನೆಮಾಡಿದೆ.
೩೩ ಜನವಸತಿ ಕೇಂದ್ರಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಈ ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ೯ ಕಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಮಳೆ ಇದೇ ರೀತಿ ಕೈ ಕೊಟ್ಟರೆ ಜಿಲ್ಲೆಯ ಅನೇಕ ಗ್ರಾಪಂಗಳು ಬಾಯಾರಿಕೆಯಿಂದ ಬಳಲುವ ಭೀತಿ ಇದೆ.

ಅಽಕಾರಿಗಳೂ ಕೂಡ ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಪರಿಹಾರಕ್ಕೆ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲು ಆರಂಭಿಸಿದ್ದಾರೆ.

ಇನ್ನು ಜಿಲ್ಲೆಯ ಪ್ರಮುಖ ಜಲಮೂಲವಾದ ವಿವಿ ಸಾಗರ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಈಗಾಗಲೇ ನಾಲ್ಕು ಬಾರಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಇನ್ನಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯಕ್ಕೆ ನೀರಿದ್ದರೂ ಕೃಷಿಗೆ ಪೂರೈಸುವಂತಿಲ್ಲ.
ಈ ವೇಳೆಗೆ ಜಿಲ್ಲೆಯಲ್ಲಿ ಶೇಂಗಾ, ಮೆಕ್ಕೆಜೋಳ, ಸಿರಿಧಾನ್ಯ ನಾಟಿ ಭರದಿಂದ ಸಾಗಿರಬೇಕಿತ್ತು. ಆದರೆ, ನೀರಿಲ್ಲದೆ ಅಲ್ಲಲ್ಲಿ ಮಾತ್ರ ಬಿತ್ತನೆಯಾಗಿದೆ. ಹಿಂಗಾರು ಕೂಡ ಕೈ ಕೊಟ್ಟರೆ ನೀರಿನ ಜೊತೆಗೆ ಮೇವಿನ ಸಮಸ್ಯೆ ಕೂಡ ಕಾಡುವ ಆತಂಕ ಇದೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ೧೮೬, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೃಹತ್ ನೀರಾವರಿ ಇಲಾಖೆ ಒಳಗೊಂಡು ಜಿಪಂ ವ್ಯಾಪ್ತಿಯ ೨೬೯ ಕೆರೆಗಳಿವೆ. ಕಳೆದೆರಡು ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಮೈದುಂಬಿದ್ದವು. ಈ ವರ್ಷ ಶೇ. ೩೦ರಿಂದ ೫೦ರಷ್ಟು ಮಾತ್ರ ನೀರಿನ ಸಂಗ್ರಹವಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ೧೮೬ ಕೆರೆಗಳಲ್ಲಿ ೪೬ರಲ್ಲಿ ನೀರೇ ಇಲ್ಲ. ೧೧೪ರಲ್ಲಿ ಕೇವಲ ಶೇ. ೧ರಿಂದ ೩೦ರಷ್ಟು ನೀರಿದೆ. ೧೬ರಲ್ಲಿ ಶೇ. ೩೧ರಿಂದ ೫೦ರಷ್ಟು, ೯ರಲ್ಲಿ ಮಾತ್ರ ಶೇ. ೫೫ರಿಂದ ೯೯ರಷ್ಟು ಜಲ ಸಂಗ್ರಹವಿದೆ.
ಈ ಕೆರೆಗಳ ನೀರಿನ ಗರಿಷ್ಠ ಸಾಮರ್ಥ್ಯ ೮.೭೭೫ ಟಿಎಂಸಿ ಇದೆ. ಆದರೆ, ಪ್ರಸ್ತುತ ೧.೨೯ ಟಿಎಂಸಿ ಮಾತ್ರ ನೀರಿದೆ. ಇವುಗಳ ವ್ಯಾಪ್ತಿಯಲ್ಲಿ ೨೦೮೮೯.೬೬ ಹೆ. ಅಚ್ಚುಕಟ್ಟು ಪ್ರದೇಶವಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ತುಂಗಭದ್ರಾ ಹಿನ್ನೀರು ಯೋಜನೆ ಮೂಲಕ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳೂ ಪ್ರಗತಿಯಲ್ಲಿವೆ. ಅಲ್ಲದೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವ ಕೆರೆಗಳಲ್ಲಿ ಒಂದಿಷ್ಟು ನೀರಿದೆ.

ಜಿಪಂ ವ್ಯಾಪ್ತಿಯಲ್ಲಿ ಒಟ್ಟು ೨೬೯ ಕೆರೆಗಳಿವೆ. ಅವುಗಳ ಪೈಕಿ ೧೬೨ ಬರಿದಾಗಿದ್ದು, ಸದ್ಯ ಪೂರ್ಣ ತುಂಬಿರುವ ಕೆರೆಗಳ ಸಂಖ್ಯೆ ಶೂನ್ಯ.

ಜಲಾಶಯಗಳ ನೀರಿನ ಪ್ರಮಾಣ


ಜಲಾಶಯ, ಅಡಿಗಳಲ್ಲಿ ಗರಿಷ್ಠ ಸಾಮರ್ಥ್ಯ, ಲಭ್ಯವಿರುವ ನೀರು, ಒಟ್ಟು ಶೇಖರಣಾ ಮಟ್ಟ ಹಾಗೂ ಪ್ರಸ್ತುತ ಸಂಗ್ರಹವಾಗಿರುವ ನೀರು ಟಿಎಂಸಿಯಲ್ಲಿ ಮಾಹಿತಿ ಹೀಗಿದೆ.
ವಾಣಿವಿಲಾಸ ಸಾಗರ-೧೩೦.೦೦-೧೨೧.೪೫-೨೩.೨೫೮-೨೧.೩೮೮
ಗಾಯತ್ರಿ-೧೪೫-೧೩೦.೦೦-೦.೩೩೭-೦
ರಂಗಯ್ಯನದುರ್ಗ-೩೩.೦೦-೧೨.೦೦-೦.೫-೦.೦೭

ದುರ್ಗದಲ್ಲೂ ನೀರಿನ ಸಮಸ್ಯೆ


ಜಿಲ್ಲಾ ಕೇಂದ್ರ ಕೋಟೆನಗರಿಗೂ ನೀರಿನ ಆತಂಕ ಇದ್ದೇ ಇದೆ. ಸದ್ಯ ಪರಿಸ್ಥಿತಿ ತೀವ್ರತರವಾಗಿಲ್ಲದಿದ್ದರೂ ಕೆಲ ಬಡಾವಣೆಗಳಲ್ಲಿ ಮರ‍್ನಾಲ್ಕು, ಇನ್ನೂ ಕೆಲವೆಡೆಗಳಲ್ಲಿ ಎಂಟತ್ತು, ೧೫ ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.
ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಿಗೆ ಜಲಮೂಲವಾದ ವಾಣಿವಿಲಾಸ ಸಾಗರ, ಗಾಯತ್ರಿ, ರಂಗಯ್ಯನದುರ್ಗ ಡ್ಯಾಂ, ಸೂಳೆಕೆರೆಗಳನ್ನು ಅವಲಂಬಿಸಿದ್ದು, ಇಲ್ಲಿ ನೀರಿನ ಪ್ರಮಾಣ ಕುಸಿದರೆ ಸಂಭಾವ್ಯ ಸಮಸ್ಯೆಯನ್ನು ತಳ್ಳಿ ಹಾಕುವಂತಿಲ್ಲ.

ಕೆರೆಗಳ ಒತ್ತುವರಿ


ಜಿಲ್ಲೆಯಲ್ಲಿ ಕೆರೆಗಳೂ ಒತ್ತುವರಿಯಾಗಿದ್ದು, ತೆರವುಗೊಳಿಸುವ ಮೂಲಕ ಕೆರೆಗಳ ವಿಸ್ತೀರ್ಣ ಕಾಯ್ದುಕೊಳ್ಳುವ ಅಗತ್ಯವಿದೆ. ಸ್ವಯಂ ಪ್ರೇರಿತವಾಗಿ ಒತ್ತುವರಿ ತೆರವು ಮಾಡಬೇಕೆಂದು ಸಂಬAಽಸಿದ ಇಲಾಖೆ ನೋಟಿಸ್ ನೀಡಿದೆ.
ಮನೆ, ಸಿಸಿರಸ್ತೆ, ಚರಂಡಿ ಇನ್ನಿತರೆ ಚಟುವಟಿಕೆಗೂ ಕೆರೆಗಳು ಒತ್ತುವರಿಯಾಗಿವೆ. ತುರ್ತಾಗಿ ತೆರವುಗೊಳಿಸುವಂತೆ ಗ್ರಾಪಂ ಅಽಕಾರಿಗಳಿಗೂ ಇಲಾಖೆ ಕೋರಿದೆ. ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಹೂಳು ತೆಗೆಸುವ ಕಾರ್ಯವಾಗಬೇಕು
ಜಿಲ್ಲೆಯ ಹಲವು ಕೆರೆಗಳಲ್ಲಿ ಹೂಳು ತುಂಬಿದ್ದರಿAದ ನೀರಿನ ಸಂಗ್ರಹ ಸಾಮರ್ಥ್ಯ ಕುಗ್ಗಿದೆ. ಹೂಳು ತೆಗೆದು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಹಳ್ಳ, ತೊರೆಯಂಥ ನೀರಿನ ಮೂಲಗಳನ್ನು ಹುಡುಕಬೇಕು. ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇಂಥ ಕೆಲಸಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು. ಮಳೆನೀರು ಕೊಯ್ಲು, ಗಿಡ ನೆಡುವುದು ಮುಂತಾದ ಪರಿಸರಸ್ನೇಹಿ ಕಾರ್ಯಗಳಲ್ಲಿ ಭಾಗಿಯಾಗಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

೩೩ ಜನವಸತಿ ಕೇಂದ್ರಗಳಲ್ಲಿ ನೀರಿನ ಸಮಸ್ಯೆ


ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದ ಪರಿಣಾಮವಾಗಿ ಜಿ¯್ಲೆಯ ವಿವಿಧ ಗ್ರಾಪಂಗಳ ವ್ಯಾಪ್ತಿಯ ೩೩ ಜನವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಒಟ್ಟು ೩೪ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ೯ ಕಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿಯೂ ವ್ಯಾಪಿಸಿವೆ.

ಸಮಸ್ಯಾತ್ಮಕ ಗ್ರಾಮಗಳು

ಶಿರಿದರಕಪಿಲೆ, ಸೊಲ್ಲಾಪುರ, ಕರಿಹಟ್ಟಿ, ಆಜಾದ್ ನಗರ, ಮದಕರಿಪುರ, ಸೊಂಡೇಕೊಳ, ದಿಂಡಾವರ ಭೋವಿ ಕಾಲನಿ, ಲಕ್ಕೇನಹಳ್ಳಿ, ಮಾವಿನಮಡು, ಆನೇಸಿದ್ರಿ ಗೊಲ್ಲರಹಟ್ಟಿ, ಬೋರನಕುಂಟೆ, ಓಣಿಹಟ್ಟಿ, ಮರಡಿಹಟ್ಟಿ, ಹಾಲಮಾದೇನಹಳ್ಳಿ, ಬೇರೇನಹಳ್ಳಿ, ಕಾಮಸಮುದ್ರ, ಅರೇಹಳ್ಳಿ, ಚಿಕ್ಕಂದವಾಡಿ, ತಾಳಿಕಟ್ಟೆ, ಗೂಳಿಹಟ್ಟಿ, ಎನ್.ವಿ. ಹಟ್ಟಿ, ಕಿಟ್ಟದಾಳ್, ಸಂಕಯ್ಯನಹಟ್ಟಿ, ಕಿಲಾರದಹಳ್ಳಿ, ಚಿತ್ರದೇವರಹಟ್ಟಿ, ಬೇಟೆ ಮರದಹಟ್ಟಿ, ಮೀಸೆ ಮರಿಯಜ್ಜನಪಾಳ್ಯ, ಶೇಷಪ್ಪನಹಳ್ಳಿ, ಹುರುಳಿ ದಿಬ್ಬಾರಹಟ್ಟಿ, ಕೆಎಚ್‌ಆರ್ ಬಡಾವಣೆ.


* ೬ ತಾಲೂಕುಗಳ ೩೩ ಜನವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
* ೩೪ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಕೆ
* ೯ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು
===
"

ಜಿಲ್ಲೆಯ ಯಾವ ಕೆರೆಗಳೂ ತುಂಬಿಲ್ಲ. ಕೆಲ ಕೆರೆಗಳಲ್ಲಿ ಮಾತ್ರ ಶೇ. ೩೦ರಷ್ಟು ನೀರು ಕಾಣುತ್ತೇವೆ. ಅಂತರ್ಜಲಮಟ್ಟ ದಿನೇ ದಿನೆ ಕುಸಿಯುತ್ತಿದೆ. ಅದರಲ್ಲೂ ಮಳೆಯಾಶ್ರಿತ ಪ್ರದೇಶಗಳಲ್ಲೂ ನೀರಿನ ಮಟ್ಟ ಹೆಚ್ಚು ಕುಸಿದಿದೆ.

— | ಧನಂಜಯ ಹಂಪಯ್ಯನಮಾಳಿಗೆ, ರೈತಸಂಘದ ಜಿಲ್ಲಾಧ್ಯಕ್ಷ


"

ಕೊಳವೆಬಾವಿಗಳ ಸಂಖ್ಯೆ ಜಾಸ್ತಿಯಾಗಿದೆ. ಸಾವಿರ ಅಡಿ ಕೊರೆಸಿದರೂ ನೀರು ಸಿಗದಂತಾಗಿದೆ. ಮುಂದಿನ ದಿನಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದೇ ಕಠಿಣವಾಗಲಿದೆ. ಬೆಳೆಗಳಿಗೆ ನೀರು ಸಿಗುವುದು ದುರ್ಲಭವಾಗಲಿದೆ. ಮುಂದಿನ ಬೇಸಿಗೆಯಲ್ಲಿ ಇನ್ನೂ ಹೆಚ್ಚು ಕಷ್ಟವನ್ನು ಅನುಭವಿಸಬೇಕಾಗುತ್ತದೆ.

— ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ರೈತ ಮುಖಂಡ

ಮೋಡ ಕವಿದ ವಾತಾವರಣ



ಜಿಲ್ಲೆಯಲ್ಲಿ ಆಗಾಗ ಮೋಡ ಕವಿದ ವಾತಾವರಣ ಕಂಡು ಬಂದರೂ ಬೇಸಿಗೆಯ ಬಿಸಿಲಿನ ಅನುಭವವೂ ಉಂಟಾಗುತ್ತಿದೆ. ಈ ಬಾರಿ ಮಳೆಗಾಲದಲ್ಲಿ ಈವರೆಗೆ ಒಂದೆರಡು ರಭಸದ ಮಳೆ ಸುರಿದರೂ ಹೇಳಿಕೊಳ್ಳುವಂತಹ ಪ್ರಯೋಜನವಾಗಿಲ್ಲ. ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದ್ದು, ಹಲವೆಡೆ ನೆಲ ಕಾಣಿಸುವಂತಹ ಸ್ಥಿತಿ ತಲುಪಿದೆ. ಅಂತರ್ಜಲವೂ ಕುಸಿಯುತ್ತಿದೆ. ಈಗಾಗಲೇ ೩೯ ಗ್ರಾಪಂಗಳ ೫೮ ಜನವಸತಿ ಕೇಂದ್ರಗಳು ನೀರಿನ ಸಮಸ್ಯೆ ಎದುರಿಸಿವೆ. ಈ ಪೈಕಿ ಜೂನ್-ಜುಲೈನಲ್ಲಿ ಕ್ರಮವಾಗಿ ೩೨-೨೩ ಕೇಂದ್ರಗಳಿಗೆ ೪೬-೩೪ ಖಾಸಗಿ ಕೊಳವೆ ಬಾವಿ, ೧೨-೯ ಕೇಂದ್ರಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಸುಮಾರು ೯೩ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಮಳೆಯಾಗದ ಕಾರಣ ಕೆರೆ ಕಟ್ಟೆಗಳ ಸ್ಥಿತಿಯಂತೂ ಹೇಳತೀರದಾಗಿದೆ.


===

ಯಾವ ಇಲಾಖೆ? ಎಷ್ಟು ಕೆರೆ



೧೮೬
ಸಣ್ಣ ನೀರಾವರಿ ಇಲಾಖೆ
೨೬೯
ಜಿಲ್ಲಾ ಪಂಚಾಯಿತಿ ವ್ಯಾಪ್ತಿ
===
ಎಷ್ಟು ಕೆರೆಗಳು ಖಾಲಿ

ಜಿಲ್ಲಾ ಪಂಚಾಯಿತಿ
೨೬೯ರಲ್ಲಿ ೧೬೨ ಖಾಲಿ
===
ಸಣ್ಣ ನೀರಾವರಿ ಇಲಾಖೆ

೧೮೬ ಕೆರೆಗಳಲ್ಲಿ ೪೬ರಲ್ಲಿ ನೀರೇ ಇಲ್ಲ
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net