ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗು Water

ಮೀರಾಸಾಬಿಹಳ್ಳಿ ರಾಣೀಕೆರೆಯಿಂದ ಸಮೀಪದ ಗರಣಿ ಹಳ್ಳದ ಚೆಕ್ ಡ್ಯಾಂಗಳಿಗೆ ಹರಿಯುತ್ತಿರುವ ನೀರಿನ ನೋಟ. Water
ಮೀರಾಸಾಬಿಹಳ್ಳಿ ರಾಣೀಕೆರೆಯಿಂದ ಸಮೀಪದ ಗರಣಿ ಹಳ್ಳದ ಚೆಕ್ ಡ್ಯಾಂಗಳಿಗೆ ಹರಿಯುತ್ತಿರುವ ನೀರಿನ ನೋಟ. Water
Published on

ಪ್ರಮುಖ ಮುಖ್ಯಾಂಶಗಳು

  • ರಾಣೀಕೆರೆಯಿಂದ ಚೆಕ್ ಡ್ಯಾಂಗಳಿಗೆ ಹರಿಯುತ್ತಿರುವ ನೀರು
  • ಸಂಭ್ರಮದಿಂದ ವೀಕ್ಷಣೆಗೆ ತೆರಳುತ್ತಿರುವ ಸಾರ್ವಜನಿಕರು
ಚಳ್ಳಕೆರೆ: ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣೀಕೆರೆ ನೀರು ಸಮೀಪದ ಗರಣಿ ಹಳ್ಳದ ಚೆಕ್ ಡ್ಯಾಂಗಳಿಗೆ ಹರಿಯುತ್ತಿದ್ದು, ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತಿದೆ. Water
ಜಿಲ್ಲಾಡಳಿತದ ಆದೇಶದಂತೆ ಕೆರೆಯಿಂದ ಒಂದು ಅಡಿ ನೀರು ಹರಿಸುವ ಕಾರ್ಯಕ್ಕೆ ಜು.10ರಂದು ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದ್ದರು. ಕೆರೆಯಿಂದ ಸುಮಾರು 400ಮೀ. ದೂರದ ಮೊದಲ ಚೆಕ್ ಡ್ಯಾಂ ತುಂಬಿ ಎರಡನೇ ಚೆಕ್ ಡ್ಯಾಂಗೆ ನೀರು ಪ್ರವೇಶ ಮಾಡಿರುವುದಕ್ಕೆ ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.
15 ದಿನಗಳ ಕಾಲ ಹರಿಯುವ ನೀರಿನಿಂದ ಒಟ್ಟು 4 ಚೆಕ್ ಡ್ಯಾಂಗಳು ತುಂಬಲಿವೆ. ಮಳೆಯಿಲ್ಲದ ಈ ಪರಿಸ್ಥಿತಿಯಲ್ಲಿ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.
ಶಾಲೆಗಳಲ್ಲಿ ಜಾಗೃತಿ: ರಾಣೀಕೆರೆಯಿಂದ ಗರಣಿ ಹಳ್ಳದ ಚೆಕ್ ಡ್ಯಾಂಗಳಿಗೆ ನೀರು ಬಿಟ್ಟಿರುವುದನ್ನು ನೋಡಲು ಸುತ್ತಲ ಗ್ರಾಮಸ್ಥರು ಸಂಭ್ರಮದಿಂದ ಚೆಕ್‌ಡ್ಯಾಂ ಬಳಿಗೆ ಜಮಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಂಗವ್ವನಹಳ್ಳಿ, ಮೀರಾಸಾಬಿಹಳ್ಳಿ, ವಿಡುಪನಕುಂಟೆ, ಕರೀಕೆರೆ ಗ್ರಾಮದ ಶಾಲೆಗಳ ಮಕ್ಕಳಿಗೆ ನೀರು ನೋಡಲು, ಈಜಾಡಲು ಡ್ಯಾಂ ಬಳಿಗೆ ಹೋಗುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಗಂಗಾ ಪೂಜೆಗೆ ಸಿದ್ಧತೆ: ಮುಂಗಾರು ಮಳೆ ಇಲ್ಲದೆ ಭಣಗುಡುತ್ತಿರುವ ಹಳ್ಳಕೊಳ್ಳಗಳಿಗೆ ರಾಣೀಕೆರೆಯಿಂದ ನೀರಿನ ಭಾಗ್ಯ ಬಂದಿದೆ. ಸುತ್ತ ಹತ್ತಾರು ಗ್ರಾಮಗಳ ರೈತರ ಜಮೀನುಗಳ ಕೊಳವೆ ಬಾವಿಗಳು, ಕುಡಿವ ನೀರಿನ ಬೋರ್‌ವೆಲ್ಗಳಲ್ಲಿ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.
ಬರಡು ಭೂಮಿ ತಂಪಾಗಿಸಲು ಹರಿದು ಬಂದಿರುವ ಗಂಗಾಮಾತೆಗೆ ಐದಾರು ಗ್ರಾಮಗಳಿಂದ ಗಂಗಾಪೂಜೆ, ಬಾಗಿನ ಸಮರ್ಪಣೆ ಹಾಗೂ ನೀರು ಹರಿಸಲು ಕಾರಣರಾದ ಶಾಸಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಕೆರೆಯ ಹಿನ್ನೆಲೆ: 1907ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದು, ರಾಜ್ಯದಲ್ಲೇ ಎರಡನೇ ದೊಡ್ಡ ಕೆರೆ ಎನ್ನುವ ಹೆಗ್ಗಳಿಕೆ ಹೊಂದಿದೆ. 582.76 ಹೆಕ್ಟೇರ್ ಕೆರೆಯ ವಿಸ್ತೀರ್ಣವಿದೆ. 24 ಅಡಿ ನೀರು ನಿಲುಗಡೆ ಸಾಮರ್ಥ್ಯವಿದೆ. ಕೆರೆಯ ಏರಿ 960 ಮೀ. ಉದ್ದವಿದೆ. ಎರಡು ತೂಬುಗಳನ್ನು ಅಳವಡಿಸಲಾಗಿದೆ. ಎಡ ತೂಬಿಗೆ ಎರಡು ಕಾಲುವೆಗಳಿವೆ. ಎಡದಂಡೆ ಕಾಲುವೆ ಉದ್ದ 7.40ಕಿ.ಮೀ., ಬಲದಂಡೆ ಕಾಲುವೆ ಉದ್ದ 8.80 ಕಿಮೀ ಇದೆ. ಐದಾರು ಗ್ರಾಮಗಳಿಗೆ ನೀರು ಒಳಪಟ್ಟಿದೆ. 891 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಕೆರೆಯ ನಿರ್ವಹಣೆ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ.

ರಾಜ ಮಹಾರಾಜರ ಕಾಲದಲ್ಲಿ ಮಾಡಿರುವ ಜನ ಕಲ್ಯಾಣ ಕಾರ್ಯಗಳಿಂದ ಈಗಲೂ ಜನ ಅನುಕೂಲ ಪಡೆಯುತ್ತಿದ್ದಾರೆ. ಇದಕ್ಕೆ ಕೆರೆಗಳ ನಿರ್ಮಾಣವೇ ಸಾಕ್ಷಿ. ಸ್ವಲ್ಪಕಾಲ ಮಳೆ ಇಲ್ಲದಿದ್ದರೂ ಕೆರೆಯಲ್ಲಿ ಸಂಗ್ರಹವಾದ ನೀರು ಕುಡಿಯಲು ಆಸರೆಯಾಗುತ್ತದೆ. ರಾಣೀಕೆರೆಯಿಂದ ಸುತ್ತಲಿನ ಗ್ರಾಮಗಳ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಿದೆ.

— ವಿ.ಆರ್. ಸಿದ್ದೇಶ್ವರಪ್ಪ ಅಧ್ಯಕ್ಷರು, ರಾಣೀಕೆರೆ ಪೂರಕ ನಾಲೆ ಹೋರಾಟಗಾರರ ಒಕ್ಕೂಟ, ಮೀರಾಸಾಬಿಹಳ್ಳಿ.

ಐದಾರು ಗ್ರಾಮಗಳ ಜೀವನಾಡಿ ಆಗಿರುವ ರಾಣೀಕೆರೆ ಸಂರಕ್ಷಣೆ ಆಗಬೇಕಿದೆ. ಭದ್ರಾ ಮೇಲ್ದಂಡೆ ಮತ್ತು ಬೊಂಬೇರಹಳ್ಳಿ ವೇದಾವತಿ ಡ್ಯಾಂನಿಂದ ರಾಣೀಕೆರೆಗೆ ನೀರು ಹರಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕಾಗಿ ಒಕ್ಕೂಟ ರಚನೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರಿನ ದೃಷ್ಟಿಯಿಂದ ಷರತ್ತು ಬದ್ಧವಾಗಿ ಚೆಕ್ ಡ್ಯಾಂಗಳಿಗೆ ನೀರು ಹರಿಸಲಾಗಿದೆ. ಶೀಘ್ರದಲ್ಲೇ ಗಂಗಾಪೂಜೆ ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

— ಡಿ. ರಾಜಣ್ಣ ಪ್ರಧಾನ ಕಾರ್ಯದರ್ಶಿ, ರಾಣೀಕೆರೆ ಪೂರಕ ನಾಲೆ ಹೋರಾಟಗಾರರ ಒಕ್ಕೂಟ, ಕರೀಕೆರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net